Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Literature (ಸಾಹಿತ್ಯ) 0

ನಾನೂ ಒಬ್ಬ ಓದುಗ. ಇನ್ನೂ ಬದುಕಿದ್ದೇನೆ!

Submitted by Gururaj Kulkarni on July 15, 2015 – 11:38 am 2 Comments

ಒಬ್ಬ ಓದುಗನಾಗಿ ನನಗೇನು ಬೇಕು ಎಂದು ನನಗಿನ್ನೂ ಯಾವುದೇ ಒಂದು ನಿರ್ಧಾರವಂತೂ ಇಲ್ಲ. ಯಾವುದೇ ಒಂದು ಪುಸ್ತಕವನ್ನು ಓದುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವದು ನನ್ನ ಅಭ್ಯಾಸ. ಇದು ಇಂದಿನ ಎಲ್ಲಾ ಪ್ರಜ್ಞೆಯುಳ್ಳ ಓದುಗ ಪುಸ್ತಕ ಆಯ್ದುಕೊಳ್ಳುವಾಗ ಅನುಸರಿಸುವ ಪ್ರಕ್ರಿಯೆ ಎಂದು ಭಾವಿಸುತ್ತೇನೆ. ಅಲ್ಲೊಂದು ಇಲ್ಲೊಂದು ವೇದಿಕೆಗಳು ಓದುಗರಿಗೆ ಇಂತಹ ಸೌಲಭ್ಯವನ್ನು ಒದಗಿಸಿಕೊಡುತ್ತವೆ. ಚುಕ್ಕುಬುಕ್ಕು ವೆಬ್ ಸೈಟ್ ಕೂಡ ಒಂದು. ಇದು ಯಾವುದೇ ಪೂರ್ವಭಾವಿ ಪೀಡಿತ ಅಭಿಪ್ರಾಯಕ್ಕೊಳಗಾಗದೇ ಕಾರ್ಯನಿರ್ವಹಿಸುತ್ತದೆ ಎಂದು ನಂಬಿದ್ದೇನೆ.
ಇಂದಿನ ವೈಜ್ಞಾನಿಕ, ತಾಂತ್ರಿಕ ಮತ್ತು ಬೌಧ್ಧಿಕ ಯುಗದಲ್ಲಿ ಏನು ಬರೆಯಬೇಕೆಂಬುದೇ ಇಂದಿನ ಅನೇಕ ಬರಹಗಾರರಿಗೆ ಮನವರಿಕೆಯಾಗಿಲ್ಲ ಅಂದುಕೊಳ್ಳುತ್ತೇನೆ. ಇಂದಿನ ಬರಹಗಾರರು ಒಂದು ಸಾಹಿತ್ಯಿಕ ಧ್ರುವೀಕರಣಕ್ಕೆ ಒಳಗಾಗಿದ್ದಾರೆಂದು ನಾನು ನಂಬಿದ್ದೇನೆ. ನನಗೆ ‘ಸಂಸ್ಕಾರ’ದ ನಾರಣಪ್ಪನಾಗಲೀ, ‘ಚಿಕ್ಕಪ್ಪ’ನ ಚಿಕ್ಕಪ್ಪನಾಗಲೀ, ‘ಧರ್ಮಶ್ರೀ’ ಯ ಸತ್ಯನಾರಾಯಣನಾಗಲೀ ಬೇಕಾಗಿಲ್ಲ. ‘ಸಾವು’ ಕಥೆಯ ಸಂಗವ್ವ , ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ವಿನ ಸುಂದರರಾಯ, ‘ಚೈತ್ರ ವೈಶಾಖ ವಸಂತ’ ಪುರಂದರ, ‘ಘಾಚರ್ ಘೋಚರ್ ‘ದ ನಾಯಕ, ‘ವೃತ್ತ’ ದ ಶಂಕ್ರಪ್ಪಗೌಡ, ಒಬ್ಬ ಸಿಂಗಾರೆವ್ವ, ಹೀಗೆ ಇಂತಹವರು ಬೇಕೆನ್ನಿಸುತ್ತದೆ. ಇದರರ್ಥ ಇತಿಹಾಸ(!)ವನ್ನು ಮರೆತು ವರ್ತಮಾನದ ಬಗ್ಗೆ ಮಾತ್ರ ಓದಬೇಕು ಎಂಬ ಭಾವನೆ ನನ್ನದಲ್ಲ. ಕ್ಲಾಸಿಕ್ಸ್ ಅಂಥ ಕರೆಸಿಕೊಳ್ಳುವ ಸಾಹಿತ್ಯಿಕ ಕೃತಿಗಳಿಂದ ಓದುಗ ಪಕ್ವನಾಗುತ್ತಾನೆ ಎಂಬ ಅರಿವು ನನ್ನಲ್ಲಿದೆ. ಆದರೆ ನಾನು ಅದಕ್ಕೆ ತಯಾರಿದ್ದೇನಾ ಅನ್ನುವುದೇ ಪ್ರಶ್ನೆ. ಒಬ್ಬ ಚೇತನ್ ಭಗತ್ ನ ಕೃತಿಗಳನ್ನು ಪೇಲವ, ಮತ್ತು ಸಾಧಾರಣ ಎಂದು ಮೂದಲಿಸುವ ಬದಲು, ಅವನು ಯುವಸಮೂಹವನ್ನು ಓದಲಿಕ್ಕೆ ಪ್ರೇರೇಪಿಸುತ್ತಿದ್ದಾನೆ ಎಂದೇಕೆ ಭಾವಿಸುತ್ತಿಲ್ಲ. ತುಕ್ಕೋಜಿಯು ಒಂದು ಕಥಾಪಾತ್ರವಾಗಿರದೆ ನಮ್ಮ ಜೀವನದ ಒಂದು ಭಾಗವಾಗಿದ್ದು ಹೇಗೆ? ಅಂದರೆ ನಮ್ಮಲ್ಲಿ ಗಟ್ಟಿ ಸಾಹಿತ್ಯ ಕಡಿಮೆಯಾಗುತ್ತಿದೆಯಾ? ಸಾಹಿತಿಗಳ ಮಕ್ಕಳೆಂದು, ಮತ್ತು ಸಾಹಿತ್ಯ ವಲಯದ ಲೇಖಕರಿಗೆ ಮಾತ್ರ ಅತೀ ಪ್ರಚಾರ ಸಿಗುತ್ತದೆಯಾ? ಬರಹಗಳು ಫೇಸ್ ಬುಕ್ ಮತ್ತು ಬ್ಲಾಗುಗಳಿಗೆ ಸೀಮಿತವಾಗಿದೆಯಾ? ಹೀಗೆ ಪ್ರಶ್ನೆಗಳನ್ನು ಹುಡುಕುತ್ತಾ ಹೋದರೆ ಸಮಂಜಸ ಉತ್ತರವೂ ದೊರೆಯುವದಿಲ್ಲ. ಚಿತ್ರವಿಮರ್ಶೆಗಳೊಂದಿಗೆ ಗಟ್ಟಿ ಕಥೆಗಳನ್ನು ಬರೆದ ವಿಕಾಸ್ ನೇಗಿಲೋಣಿ ಇದ್ದಾರೆ. ವ್ಯಾಕರಣದ ಜ್ಞಾನದ ಹಂಚುವದರ ಜೊತೆಗೆ ಅಮೇರಿಕಾವನ್ನು ಪರಿಚಯಿಸುವ ಶ್ರೀವತ್ಸ ಜೋಷಿಯವ್ರಿದ್ದಾರೆ. ಹೀಗೆ.
ಆದರೂ, ಬ್ಲಾಗುಗಳಲ್ಲಿ, ವೆಬ್ ಸೈಟುಗಳಲ್ಲಿ ಪ್ರಕಟಿತ ಬರಹಗಳಿಗೆ ಸ್ಪಂದಿಸಲಾರದಷ್ಟೂ ವ್ಯವಧಾನ, ಸಹನೆ ಇಲ್ಲದ ಬರಹಗಾರರಿದ್ದಾರೆ. ‘ಅ’ ಮತ್ತು ‘ಹ’ ಕಾರಗಳ ಅರಿವಿಲ್ಲದ ಲೇಖಕ ಮತ್ತು ಸಂಭಾಷಣಾಕಾರರಿದ್ದಾರೆ. ತಮ್ಮ ಲೇಖನದ ಪ್ರಸ್ತುತೆಯನ್ನು ಪ್ರಶ್ನಿಸಿದ ಓದುಗರನ್ನು ಅವಮಾನಿಸುವ ದಾರ್ಷ್ಟ್ಯ ಹೊಂದಿದ ಮತ್ತು ತಮಾಷೆಯ ಜೊತೆಗೆ ಅಸಂಭದ್ದ ಲೇಖನಗಳನ್ನು ಬರೆಯುವ ಫೇಸ್ ಬುಕ್ ಲೇಖಕರಿದ್ದಾರೆ. ತಾವು ಬರೆದಿದ್ದರಲ್ಲಿ ಯಾವುದೇ ನೈತಿಕತೆ ಹುಡುಕಬಾರದೆಂಬ ಅವ್ಯಕ್ತ ತತ್ವ ಈ ತರಹದ ಲೇಖಕರದ್ದು. ಹಾಗೆಂದರೆ ಲೇಖಕರಿಗೆ ಸಾಮಾಜಿಕ, ನೈತಿಕ ಹೊಣೆಯೇ ಇಲ್ಲವೇ? ಹಾಗೆಂದ ಮಾತ್ರಕ್ಕೆ ಬರಹಗಾರ ಸಮಾಜದಿಂದ ದೂರವೇ? ಇದೆಲ್ಲ ಭ್ರಮೆಯೇ? ಗೊತ್ತಿಲ್ಲ.
ಮನಸ್ಸಿನ ಖುಷಿಗಾಗಿ ಓದುವುದು ಓದುಗನ ಮೊದಲ ಹಂತವೆಂದು ಭಾವಿಸಿದ್ದೇನೆ. ಓದಿನೊಂದಿಗೇ ಓದುಗನನ್ನು ಬೆಳೆಸುವ ಇಂದಿನ ಸಾಹಿತ್ಯದ ಅತಿದೊಡ್ಡ ಕೊರತೆ ಎಂದು ಅನ್ನಿಸುತ್ತದೆ. ಒಬ್ಬ ನಗರವಾಸಿ ನೌಕರ, ಊರಿಂದ ಬಂದ ,ತನ್ನ ತಂದೆ ತಾಯಿಗಳನ್ನು ಮನೆಗೆ ಕರೆತರಬೇಕಾದರೆ, ಅದಕ್ಕೆ ತಗಲುವ ಸಮಯದ ಕುರಿತು ಯೋಚಿಸುತ್ತಾನೆ. ಮದುವೆ ನಿಶ್ಚಯವಾದ ಹುಡುಗನಿಗೆ, ತನ್ನ ಭಾವೀ ಪತ್ನಿಯ ಎದು ತನ್ನ ಕಾಲೇಜು ಗೆಳತಿಯನ್ನು ಮಾತನಾಡಿಸುವಾಗ ಸಂಕೋಚನಾಗುತ್ತಾನೆ. ಒಬ್ಬ ಓದುಗ ತನ್ನ ಮೆಚ್ಚಿನ ಬರಹಗಾರನ ಎದುರು ಮೌನನಾಗುತ್ತಾನೆ. ಏರುತ್ತಿರುವ ದರಗಳ ನಡುವೆ ಸಂಸಾರ ನಡೆಸಲು ಮಧ್ಯಮ ವರ್ಗದ ಯುವತಿ ತಡಾಬಡಿಸುತ್ತಿರುವಾಗಲೇ ಇಷ್ಟವಾದ ಲಿಪ್ ಸ್ಟಿಕ್ ಗೆ ಆಸೆ ಪಡುತ್ತಾಳೆ, ಹೀಗೆ, ವಿವಿಧ ಸ್ತರದ ಮನುಷ್ಯನ ವಿವಿಧ ದ್ವಂದ್ವಗಳನ್ನು ಅಣಕಿಸುವ , ಪರಿಸ್ಥಿತಿಯು ನಿಯಂತ್ರಿಸುತ್ತಿರುವ ಅವನ ಅಶಕ್ತತೆಯನ್ನು ಛೇಡಿಸುವ, ಸೋಗಲಾಡಿತನದ ಬದುಕನ್ನು ಬಹಿರಂಗಗೊಳಿಸುವ, ಲಘು ಸಾಹಿತ್ಯದ ಜೊತೆಗೆ ಗಂಭೀರ ಸಾಹಿತ್ಯ ಸೃಷ್ಟಿಗೆ ಪ್ರಯತ್ನಿಸುವ ಬರಹಗಾರರು ಬೇಕಿದ್ದಾರೆ ಎಂಬುದೇ ಪ್ರಸ್ತುತ ಎಂದೆನ್ನಿಸುತ್ತದೆ. ನಾನು ಒಬ್ಬ ಓದುಗನಾಗಿ ಸಾಹಿತ್ಯ ವಲಯದಿಂದ ಇಷ್ಟನ್ನು ಅಪೇಕ್ಷಿಸುವದರಲ್ಲಿ ತಪ್ಪಿಲ್ಲ ಎಂದು ಭಾವಿಸಿದ್ದೇನೆ.

2 Comments »

 • Umesh Desai says:

  5
  ಇಲ್ಲಿ ಲೇಖಕನ ಮಿತಿಗಳ ಬಗ್ಗೆಯೂ ಪ್ರಶ್ನೆಯಿದೆ ನೀವು ಹೇಳಿದಂತೆ ಈಗೀಗ
  ಓದುಗನಿಗೆ ಛಲೋ ಅನ್ನುವ ಸಾಹಿತ್ಯಸಿಗೋದು ಅಪರೂಪ ಒಂದು ಕಾರಣ ಅಂದರ
  ಲೇಖಕ ಮಾಧ್ಯಮ ಹುಡುಕುತ್ತಿದ್ದಾನೆ ಪುಸ್ತಕ ಛಾಪಸೋದು ಅದು ಬಿಕರಿಯಾಗೋದು
  ಎರಡೂ ಅಸಾಧ್ಯ ಸಂಗತಿ ಆಗ್ಯಾವು ಅಂದರ ಅವಗ ತನ್ನ ಕೃತಿ ಎಲ್ಲಾರೂ ಓದಲಿ ಅನ್ನುವ ಹಂಬಲ
  ಬ್ಲಾಗು ಒಂದು ಶಕ್ತಿಸಾಲಿ ಮಾಧ್ಯಮ ಆಗಿತ್ತು.ಅದರಾಗೂ ಈಗ ಓದುಗ ನಾಪತ್ತೆ ಅನಿವಾಯF ಆಗಿ
  ಫೇಸಬುಕ್ಕನ್ನು ಬರೆಯುವವ ಆಶ್ರಯಿಸಬೆಕಾಗೇದ…

 • H A Patil says:

  ಗುರುರಾಜ ಕುಲಕರ್ಣಿಯವರಿಗೆ ವಂದನೆಗಳು
  ನಿಮ್ಮ ಈ ಲೇಖನ ಓದಿದೆ ನಿಮ್ಮ ಅಬಿಪ್ರಾಯಕ್ಕೆ ನನ್ನ ಸಹಮತವಿದೆ. ಓದುಗರ ಮತ್ತು ಬರಹಗಳ ಕೊರತೆಯಿಂದ ಚುಕು ಬುಕು ಬ್ಲಾಗ್‌ ಕೊನಯುಸಿರೆಳೆಯಿತೆಂದು ಕೆಲ ದಿನಗಳ ಹಿಂದೆ ಕೇಳಿದೆ ಬಹಳ ವಿಷಾದಕರ ಸಂಗತಿ ಅಲ್ಲವೆ..!

Leave a comment