Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ) 0

ಬೆಚ್ಚಿಸಿದ ಬೆಂಕಿಯುಂಡೆ….!

Submitted by Hosmane Muttu on June 25, 2016 – 3:01 am One Comment

ಲ್ಲಾರೆ ಏರು….! ಹೀಗೆಂದರೆ ಎಂಥಾ ಧೈರ್ಯಸ್ಥನ ಎದೆಯಲ್ಲೂ ಭತ್ತ ಕುಟ್ಟಿದ ಅನುಭವ. ಪೇಟೆಗೆ ಹೋಗುವ ಏರು ದಾರಿ; ಸುತ್ತ ಕಲ್ಲು ಬಂಡೆಯ ಹಾಸಿನಿಂದ ಕೂಡಿ ಕಲ್ಲಾರೆ ಏರು ಎಂದೇ ಹೆಸರಾಯಿತು. ಇದು ಪ್ರಸಿದ್ಧಿಗೆ ಬಂದದ್ದು ತನ್ನ ವಿಷಿಷ್ಟ ಕಲ್ಲು ಬಂಡೆಯ ಹಾಸಿನಿಂದಲ್ಲ; ಬದಲಿಗೆ ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದ ಭೂತ-ದೆವ್ವಗಳ ರೋಚಕ ಕಥೆಗಳಿಂದ. ಜೊತೆಗೆ ಒಬೊಬ್ಬರಿಗೆ ಒಂದೊಂದು ತೆರನಾದ ವಿನೋದ ಹಾಗೂ ವಿಚಿತ್ರ ಎನ್ನಿಸುವ ಅನುಭವ ಅಲ್ಲಿ ಉಂಟಾದ್ದರಿಂದ ಎಂದರೆ ಅದು ಸುಳ್ಳಲ್ಲ.
ನೆರಳಿಗೆ ಅಂಜುವ ಅಳ್ಳೆದೆಯ ಇಲಿ ಹೋದರೆ ಹುಲಿ ಹೋಯಿತೆಂಬ ಅಂತೆ-ಕಂತೆಗಳ ಮಾತು ಬಿಡಿ, ಗಟ್ಟಿಗುಂಡಿಗೆಯ ಭಟ್ಟರೇ ಒಮ್ಮೆ ತಮಗಾದ ಅನುಭವ ಬಿಚ್ಚಿಟ್ಟಾಗ, ನಂಬದೇ ಇರುವುದಾದರೂ ಹೇಗೆ…? ಇನ್ನು ಅವರದೇ ಮಾತು ಕೇಳಿಸಿಕೊಳ್ಳುವುದಕ್ಕೂ ಮುನ್ನ ಆಗಿನ ಪರಿಸ್ಥಿತಿ ಕೊಂಚ ಕೇಳಿ. ಒಂದು ಬೆಂಕಿಕಡ್ಡಿ ಸೇರಿದಂತೆ ಚಿಕ್ಕಪುಟ್ಟ ವಸ್ತುಗಳಿಗೂ ಎಂಟೋ, ಹತ್ತೋ ಕಿಲೋಮೀಟರ್ ದೂರದ ಪೇಟೆಯನ್ನೇ ನಂಬಿಕೊಳ್ಳುವ ಸ್ಥಿತಿ. ಹಾವು ಹರಿದಂತಿದ್ದ ಕಾಡು ದಾರಿ. ಬೈಸಿಕಲ್ಲೇ ಅಲ್ಲೊಂದು ಇಲ್ಲೊಂದು ಎಂಬಂತೆ ಇದ್ದ ಹೊತ್ತಿನಲ್ಲಿ ಎಲ್ಲರಿಗೂ ಕಾಲೇಶ್ವರಾ ಎಕ್ಸ್‍ಪ್ರೆಸ್ಸೇ ಗತಿ.
ಬೇಸಿಗೆ ಕಾಲದ ಒಂದು ದಿನ. ಕಾರ್ಯನಿಮಿತ್ತ ಪೇಟೆಗೆ ಬಂದ ಭಟ್ಟರು ಕೆಲಸ ಮುಗಿಸಿ ಮನೆಯತ್ತ ಮುಖಮಾಡುವಲ್ಲಿಗೆ ಕೈಗಡಿಯಾರದ ಮುಳ್ಳು ಹತ್ತರ ಹದ್ದು ಮೀರಿ ನಡೆದಿತ್ತು. ಅಮಾವಾಸ್ಯೆಯ ಹತ್ತಿರದ ದಿನಗಳವು. ಹೆಪ್ಪು ಹಾಕಿದಂತಹ ಕಡು ಕತ್ತಲು. ಒಬ್ಬರ ಮುಖ ಒಬ್ಬರಿಗೆ ಕಾಣಿಸದಷ್ಟು ದಟ್ಟ. ದೂರದ ಹಳ್ಳಿಯಿಂದ ಕ್ಷೀಣವಾಗಿ ಆಗೊಮ್ಮೆ, ಈಗೊಮ್ಮೆ ಕೇಳಿ ಬರುವ ನಾಯಿಯ ಕೂಗು. ಆ ನೀರವ ರಾತ್ರಿಯಲ್ಲಿ ಚಿರಿ ಚಿರಿ ಎನ್ನುವ ರಾತ್ರಿ ಹುಳುಗಳ ಶಬ್ದ ಬಿಟ್ಟರೆ, ಮೌನ ತಾನೇ ತಾನಾಗಿತ್ತು.
ಏಕಾಂಗಿಯಾಗಿ ಮನೆಕಡೆ ಹೊರಟ ಭಟ್ಟರ ತಲೆಯಲ್ಲಿ ಯಾವುದೋ ವ್ಯವಹಾರದ ಲೆಕ್ಕಾಚಾರವೊಂದು ಗಿರಿಕಿ ಹೊಡೆಯುತ್ತಲೇ ಇತ್ತು. ಪರಿಚಿತ ದಾರಿಯಾದ್ದರಿಂದ ಹಾದಿ ಸಾಗಿದ್ದು ತಿಳಿಯಲೇ ಇಲ್ಲ. ಕಾಲುಮಾತ್ರ ಕಲ್ಲಾರೆ ಏರು ತುಳಿಯುತ್ತಲೇ ಸಾಗಿತ್ತು. ಹಾಗೆ ಅನ್ಯಮನಸ್ಕರಾಗಿ ಸಾಗುತ್ತಿದ್ದ ಭಟ್ಟರ ಬಾಯಿಂದ ಅವರಿಗರಿವಿಲ್ಲದೇ ‘ಆ…!” ಎಂಬ ಉದ್ಗಾರ. ಕಾರಣ ರಸ್ತೆ ಪಕ್ಕ ಕೇವಲ ಕೆಲವೇ ಅಡಿ ದೂರದಲ್ಲಿ ಆಳೆತ್ತರ ಉರಿವ ಬೆಂಕಿ….!
ಆ ತಕ್ಷಣಕ್ಕೆ ಅವರಲ್ಲಿ ‘ಛೇ….! ಯಾರೋ ಬೀಡಿ ಸೇದಿ ಎಸದದ್ದರಿಂದ ಒಣಹುಲ್ಲು, ದರಕಲೆಗಳಿಗೆ ಬೆಂಕಿ ಹತ್ತಿಕೊಂಡಿತಾ….! ಇಲ್ಲವೇ ಪುಂಡು-ಪೋಕರಿಗಳೇನಾದರೂ ಮೋಜಿಗೆ ಬೆಂಕಿ ಇಟ್ಟರಾ….!’ – ಹೀಗೊಂದು ವಿಚಾರ ಹಣಕಿ ಹಾಕತೊಡಗಿದಂತೆ; ಬೆಂಕಿ ಆರಿಸಿಯೇ ಹೋಗೋಣ ಅಂತ ಕಪಾಲಿಕನ ಇಂದ್ರಜಾಲದೊಳಗೆ ಸಿಲುಕಿದವರಂತೆ ಅತ್ತ ನಡೆದರು. ಏನಾಶ್ಚರ್ಯ….! ಭಟ್ಟರು ಬೆಂಕಿಯಡೆಗೆ ಸಾಗಿದಂತೆ ಬೆಂಕಿ ಕೂಡಾ ಮುಂದೆ ಮುಂದೆ ಸಾಗುತ್ತಲೇ ಇತ್ತು. ಹೀಗೆ ಬೆಂಕೆಯನ್ನು ಹಿಂಬಾಲಿಸಿ ಕೆಲ ಹೆಜ್ಜೆ ಕಾಕಿದ ಭಟ್ಟರಿಗೆ ಥಟ್ಟನೆ ತಾವಿರುವ ಜಾಗದ ಅರಿವಾಯಿತು. ಥೂ…. ಇದರಾ…. ನಾಶನ ಬಡಿಲಿ….! ಅಂದವರೇ, ಕೊಂಚ ಸಾವರಿಸಿಕೊಂಡು ಮನೆ ದಾರಿ ತುಳಿದರೋ ಇಲ್ಲವೋ; ಆ ತಕ್ಷಣಕ್ಕೆ ಹತ್ತಿರದ ಮರದೆತ್ತರಕ್ಕೆ ಬೆಂಕಿ ಉಂಡೆಯೊಂದು ನೆಗೆದು ಚಿಮ್ಮಿ, ಇಡೀ ಮರ ಭಗ್ಗನೆ ಹತ್ತಿಕೊಂಡು ಕ್ಷಣ ಕಾಲ ಧಗಧಗನೆ ಉರಿದು ಕಣ್ಮರೆಯಾಗಿಬಿಟಿತು. ಮಂದ ವಿದ್ಯುತ್ತಿನ ಪ್ರವಾಹವೊಂದು ಮೈಯಲ್ಲೆಲ್ಲ ಸಂಚರಿಸಿದ ಅನುಭವ.
ಈ ಕಗ್ಗತ್ತಲಲ್ಲಿ ಎದೆ ಝಲ್ ಎನ್ನಿಸುವ ಈ ಸನ್ನಿವೇಷದಿಂದ ಅಳ್ಳೆದೆಯವರಾಗಿದ್ದರೆ ಆ ಹೊತ್ತಿಗೆ ಏನಾಗಿಬಿಡುತ್ತಿತ್ತೋ; ಭಟ್ಟರಿಗೋ ದೆವ್ವ-ಭೂತಗಳ ಆಟ ಹೊಸದೇನು ಅಲ್ಲ, ಜೊತೆಗೆ ಅಪ್ರತಿಮ ಧೈರ್ಯಶಾಲಿ, ಹಾಗಾಗಿ ಅಂಥಾ ಆಘಾತವೇನೂ ಘಟಿಸಲಿಲ್ಲವೆನ್ನಿ.
ಕುತುಹಲಕ್ಕೆಂದು ಮರುದಿನ ಹಗಲು ಹೊತ್ತಿನಲ್ಲಿ ಹೋಗಿ ನೋಡಿದ ಅವರಿಗೆ ಅಲ್ಲಿ ಕಂಡದ್ದೇನು….? ಮಣ್ಣಂಗಟ್ಟಿ….! ಬೆಂಕಿ ಹತ್ತಿದ ಕುರುಹೂ ಇಲ್ಲ. ಮರ ಮಾತ್ರ ಹಿಂದಿನ ರಾತ್ರಿಯ ಆ ಘಟನೆಗೆ ಸಾಕ್ಷಿ ಅಲ್ಲವೆಂಬಂತೆ ಎಂದಿನ ಹಸುರಿನಿಂದ ನಳನಳಿಸುತ್ತಲೇ ಇತ್ತು. ಈ ವಿಷಿಷ್ಟ ಅನುಭವದ ವೆಂಕಟಗಿರಿ ಭಟ್ಟರು ಇಂದು ಇಲ್ಲ; ಅದರೊಟ್ಟಿಗೆ ಕಲ್ಲಾರೆ ಏರಿನ ದೆವ್ವ-ಭೂತಗಳ ಭಯವೂ. ಕಾರಣ ಭರದಿಂದ ಬೀಸಿದ ನಗರೀಕರಣಕ್ಕೆ ಕಲ್ಲಾರೆ ಏರು ಕೂಡಾ ಹೊರತಾಗಿಲ್ಲ. ಜನಸಂಖ್ಯಾ ಸ್ಪೋಟದಿಂದ ಕಲ್ಲಾರೆಯ ಸುತ್ತ ಮುತ್ತ ಮನೆಗಳಾಗಿವೆ. ಅಂದೆಂದೋ ಕಾಡಿನಿಂದಾವೃತ್ತವಾಗಿ ಗವ್ ಎನ್ನುತ್ತಿದ್ದ ಜಾಗವೀಗ ಬಟ್ಟಾಂಬಯಲು. ಗೌಜಿಗೆ ಹೆದರಿ ದೆವ್ವ-ಭೂತಗಳೇ ಕಾಲಿಗೆ ಬುದ್ಧಿ ಹೇಳಿಬಿಟ್ಟವು. ಈಗ ಕಲ್ಲಾರೆಯ ದೆವ್ವ-ಭೂತಗಳ ಕಥೆಯೊಟ್ಟಿಗೆ ಹಂದಿಗೋಡು ವೆಂಕಟಗಿರಿ ಭಟ್ಟರೂ ನೆನಪಲ್ಲಿ ಚಿರಸ್ಥಾಯಿ.

-ಹೊಸ್ಮನೆ ಮುತ್ತು.

One Comment »

  • pramodlns says:

    ಒಂದು ಸಣ್ಣ ಕಥೆ ನೆನಪಾಗುತ್ತದೆ ….
    ಒಬ್ಬ ವ್ಯಕ್ತಿ …ಏನೇ ಆದರೂ ಹೆದರದ ವ್ಯಕ್ತಿ…ಒಂದು ದಿನ ಗೆಳೆಯರೊಂದಿಗೆ ಪಣ ಕಟ್ಟಿ ಸ್ಮಶಾನಕ್ಕೆ ಹೋದ…ಪಣದ ಪ್ರಕಾರ ಒಂದು ಮೊಳೆ ಗೋರಿಗೆ ಹೊಡೆದು ಬರುವದು…ಮೊಳೆ ಹೊಡೆಯುವಾಗ ಅವನ ಪಂಚೆ ಮೊಳೆಗೆ ಸಿಕ್ಕಿತು…..ಬರುವಾಗ ಯಾರೋ ಅವನ್ನನ್ನು ಎಳೆದಂತಾಯಿತು…..ಅವನ ಜೀವನದ ಕೊನೆಯ ಕ್ಷಣ ಅದಾಯಿತು…

    ನೋಡಿದ್ದು ಸುಳ್ಳಾಗಬಹುದು….ಕೇಳಿದ್ದು ಸುಳ್ಳಾಗಬಹುದು…ಕ್ಷಣದಲ್ಲಿ ಅನುಭವಿಸಿದ್ದು ಸುಳ್ಳಾಗಬಹುದು……ನಿಧಾನಿಸಿ ಯೋಚಿಸಿದಾಗ ನಿಜವೂ ತಿಳಿಯುವದು…

Leave a comment