Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Philosophy (ತತ್ವಶಾಸ್ತ್ರ) 1

ಬದುಕಿಗೆ ಭಗವದ್ಗೀತೆ – ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ

Submitted by arathivb arathivb on November 28, 2017 – 5:17 am

ಬದುಕಿಗೆ ಭಗವದ್ಗೀತೆ –  ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ

’ಸ್ಥಿತಪ್ರಜ್ಞನು ಹೇಗಿರುತ್ತಾನೆ? ಹೇಗೆ ವರ್ತಿಸುತ್ತಾನೆ?’ ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಉತ್ತರಿಸಲಾರಂಭಿಸಿದ್ದ. ‘ಆತ್ಮತುಷ್ಟಿ’ಯನ್ನೇ ಸ್ಥಿತಪ್ರಜ್ಞನ ಮೊದಲ ಲಕ್ಷಣವಾಗಿ ಕೃಷ್ಣನು ಹೇಳಿದ್ದನ್ನೂ ಚರ್ಚಿಸಿದ್ದೇವೆ. ಮುಂದುವರೆಸುತ್ತಾನೆ ಕೃಷ್ಣ-
ದುಃಖೇಷ್ವನುದ್ವಿಘ್ನಮನಾಃ ಸುಖೇಷು ವಿಗತಸ್ಪೃಹಃ I
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ II
ಸ್ಥಿತಪ್ರಜ್ಞನು ದುಃಖದಲ್ಲಿ ಉದ್ವಿಗ್ನನಾಗುವುದಿಲ್ಲ. ಸುಖದ ಬಗೆ ಸ್ಪೃಹೆ ಬೆಳೆಸಿಕೊಳ್ಳುವುದಿಲ್ಲ. ರಾಗ-ಭಯ-ಕ್ರೋಧಗಳನ್ನು ಬಿಡುತ್ತಾನೆ. ಇಂತಹ ಸ್ಥಿತಧೀಃ (ಸ್ಥಿತಪ್ರಜ್ಞನು) ‘ಮುನಿ’ ಎನಿಸುತ್ತಾನೆ.
ಮನುಷ್ಯನಿಗೆ ಜೀವನಪರೀಕ್ಷೆಗಳು ಬರುವುದೇ ಸುಖದುಃಖಗಳ ರೂಪದಲ್ಲಿ! ಇವನ್ನು ಎದುರಿಸಿ, ಗೆಲ್ಲಬೇಕು ಎನ್ನುವ ಅರಿವು ಸ್ಥಿತಪ್ರಜ್ಞನಲ್ಲಿರುತ್ತದೆ. ಹಾಗಾಗಿ ಆತ ದುಃಖದುಗುಡಗಳು ಬಂದಾಗ, ಕಂಗಾಲಾಗದೆ, ಉದ್ವಿಗ್ನನಾಗದೆ, ಸಹನೆಯಿಂದ ಎದುರಿಸುತ್ತಾನೆ. ತಾತ್ಕಾಲಿಕವಾದ ಸುಖಸಾಧನಗಳಾದ ವಸ್ತು-ವ್ಯಕ್ತಿ-ಸ್ಥಾನ-ಮಾನಗಳ ಬಗ್ಗೆ ಸ್ಪೃಹೆ (ಮಮಕಾರ-ಮೋಹ) ಬೆಳೆಸಿಕೊಳ್ಳುವುದಿಲ್ಲ. ನಿರ್ಲಿಪ್ತವಾಗಿರುತ್ತಾನೆ. ಸುಖದ ಮತ್ತಿನಲ್ಲಿ ವಾಸ್ತವವನ್ನು ಮರೆಯುವುದಿಲ್ಲ. ಸುಖ ಬಂದಾಗ ಹಿಗ್ಗಿ ಕುಣಿದಾಡುವುದಿಲ್ಲ, ಅದು ಕಳೆದು ದುಃಖ ಬಂದಾಗಲೂ ಕುಗ್ಗಿ ಕುಸಿಯುವುದಿಲ್ಲ. ಇಂತಹ ಸಮತ್ವಭಾವದ ಶಕ್ತಿಯಿಂದಲೇ ಸ್ಥಿತಪ್ರಜ್ಞನು ಜೀವನದಲ್ಲಿ ಸರ್ವಥಾ ಶಾಂತನೂ ಶಕ್ತನೂ ಆಗಿದ್ದು, ಎಲ್ಲವನ್ನೂ ಗೆದ್ದು ನಿಲ್ಲುತ್ತಾನೆ. ಸದಾ ಪ್ರಸನ್ನನೂ, ತೀಕ್ಷ್ಣಮತಿಯೂ ಆದ ಆತನಿಗೆ ಕಾರ್ಯರಂಗದಲ್ಲಿ ಸಾಫಲ್ಯ ಸಿದ್ಧಿಸುವುದೂ ಸಹಜವೇ ಅಲ್ಲವೆ?! ಸಾಮಾನ್ಯರ ವಿಷಯವೇ ಬೇರೆ. ಅವರು ಎಡವುವುದೆ ಸುಖದುಃಖಸಂದರ್ಭಗಳಲ್ಲಿ. ಸುಖ ಬಂದಾಗ ಅದನ್ನು ಶಾಶ್ವತ ಎಂದು ಭ್ರಮಿಸಿ ಸ್ಪೃಹೆ ಬೆಳೆಸಿಕೊಳ್ಳುತ್ತಾರೆ, ಅತಿಯಾಗಿ ನೆಚ್ಚಿ ಮೋಸಹೋಗುತ್ತಾರೆ, ನೋವು ಬಂದಾಗ, ಹತಾಶರಾಗಿ ಕೈಚೆಲ್ಲಿ ಕೂರುತ್ತಾರೆ.
ವೀತ-ರಾಗ-ಭಯ-ಕ್ರೋಧಃ-ರಾಗ, ಭಯ ಮತ್ತು ಕ್ರೋಧಗಳನ್ನು ಬಿಟ್ಟವನು ಎಂದರ್ಥ. ರಾಗ- ಆಂತರ್ಯದ ಸತ್ಯವನ್ನು ಮರೆತು. ಬಾಹ್ಯದ ವಸ್ತು-ವ್ಯಕ್ತಿ-ಸುಖ-ದುಃಖಾದಿಗಳ ಬಗ್ಗೆ ಮಮಕಾರ ನಿರೀಕ್ಷೆಗಳನ್ನು ಬೆಳೆಸಿಕೊಳ್ಳುವುದೇ ‘ರಾಗ’. ಈ ರಾಗವೆನ್ನುವುದು ಕಣ್ಣ ಮುಂದಿರುವ ಬಣ್ಣದ ಕನ್ನಡಕದಂತೆ ಎಲ್ಲವನ್ನು ವ್ಯತ್ಯಸ್ತವಾಗಿ ತೋರಿಸಿ, ಸುಖದ ಬೆನ್ನಟ್ಟುವಂತೆ ನಮ್ಮನ್ನು ದಾರಿತಪ್ಪಿಸುತ್ತದೆ. ಇದರ ಬಗ್ಗೆ ಈಗಾಗಲೇ ವಿವರವಾಗಿ ನೋಡಿದ್ದೇವೆ.
ಭಯ ಎಂದರೆ ’ಸುಖವು ಎಲ್ಲಿ ಕೈತಪ್ಪಿ ಹೋಗುವುದೋ’ ಎಂದೋ ಅಥವಾ ’ಎಲ್ಲಿ ದುಃಖ-ಅವಮಾನ-ನಿರಾಶೆಗಳು ಎದುರಾದಾವೋ’ ಎಂದೋ ಅಸುರಕ್ಷೆಯ ಭಾವ ತಾಳುವುದು. ಐಶ್ವರ್ಯವಿದ್ದವರೂ, ಅದೆಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭಯ! ಧನಿಕರಾಗಿದ್ದರೂ, ‘Income Tax’ರವರ ಕಣ್ಣುತಪ್ಪಿಸಿ ಎಲ್ಲವನ್ನೂ ತಾನೇ ಕಬಳಿಸುವುದು ಹೇಗೆ?’ ಎಂದೇ ನಿರಂತರ ಚಿಂತಿಸುವವರಿಗೂ ಈ ಭಯವೇ ಮೂಲ! ಉನ್ನತ ಪದವಿಯಲ್ಲಿದ್ದರೂ, ಅದು ಎಂದಾದರೂ ತಪ್ಪಿಹೋದೀತೆಂದು ಭಯಪಡುತ್ತಲೇ ಇರುವ ಉದಾಹರಣೆಗಳೂ ಸರ್ವೇ ಸಾಮಾನ್ಯ. ವೃದ್ಧ ಮಾತಪಿತೃಗಳನ್ನೇ ತ್ಯಜಿಸುವ ಪಾಪಕ್ಕೂ ’ನನ್ನ ಸುಖಕ್ಕೆ ಅಡ್ಡಿಯಾದಾರು’ ಎಂಬ ಭಯವೇ ಮೂಲ ಪ್ರೇರಣೆಯಲ್ಲವೆ? ಸೊಸೆಯನ್ನು ಮಿತಿಮೀರಿ ಹದ್ದುಬಸ್ತಿನಲಿಟ್ಟುಕೊಳ್ಳಲು ಮುಂದಾಗುವುದೂ ’ಮಗನನ್ನು ನನ್ನಿಂದ ಕಸಿದುಕೊಂಡಾಳೆಂಬ ಭಯದಿಂದಲೇ ಅಲ್ಲವೆ? ಓದಿದ್ದನ್ನೂ ಪರೀಕ್ಷೆ ಬರೆಯುವಾಗ ಮರೆಯುವುದು, ಕಲಿತಿದ್ದನ್ನು ವೇದಿಕೆಯೇರಿದಾಗ ಮರೆಯುವುದು, ಇವೆಲ್ಲ ಭಯಗ್ರಸ್ತರ ಪಾಡೇ ಅಲ್ಲವೆ?
ಒಟ್ಟಿನಲ್ಲಿ, ಜೀವನದಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿ ಬಂದರೂ ಧೈರ್ಯಗೆಡುವಂತಹ ಮನಃಸ್ಥಿತಿಯನ್ನು ನಿರ್ಮಿಸುತ್ತದೆ ಈ ಭಯ. ಭವಿಷ್ಯದಲ್ಲೇನಾದೀತೋ ಎಂಬ ಭಯದಲ್ಲಿ, ವರ್ತಮಾನದ ಸುಖವನ್ನೂ ಆಸ್ವಾದಿಸದೇ ಉಳಿಯುವಂತೆ ಮಾಡುತ್ತದೆ ಈ ಭಯ! ಇರುವ ಭೋಗವನ್ನು ಆತುರಾತುರದಿಂದ ಮಿತಿಮೀರಿ ಕಬಳಿಸಿ ತನುಮನಗಳ ಆರೋಗ್ಯವನ್ನು ಕೆಡೆಸಿಕೊಳ್ಳುವಂತೆ ಮಾಡುತ್ತದೆ ಭಯ! ಇರುವುದನ್ನು ತಾನೂ ಅನುಭವಿಸದೇ ಬಂಧುಮಿತ್ರರಿಗೂ ಹಂಚದೆ ಜೀವನವೆಲ್ಲ ಕೂಡಿಟ್ಟು ಎಣಿಸುತ್ತ ದರಿದ್ರರಾಗಿಯೇ ಉಳಿಯುವಂತೆಯೂ ಮಾಡುತ್ತದೆ ಈ ಭಯ! ಅಧಿಕಾರ-ಐಶ್ವರ್ಯ-ಸ್ತ್ರೀ ಮುಂತಾದುವನ್ನು ಕುತಂತ್ರದಿಂದ ಕಬಳಿಸಿಯೂ ಕಂಸ-ರಾವಣ-ದುರ್ಯೋಧನಾದಿಗಳು ಚಣಕಾಲವೂ ನೆಮ್ಮದಿಯಿಂದಿರದೆ, ಭಯದಲ್ಲೇ ಕಾಲಕಳೆದ ಉದಾಹರಣೆಗಳನ್ನು ಪುರಾಣಕಥಾನಕಗಳು ನಮಗೆ ತಿಳಿಸುತ್ತಲೇ ಬಂದಿವೆ. ಕೂಟತಂತ್ರಗಳಿಂದ ದೇಶದೇಶಗಳನ್ನು ಕಬಳಿಸಿ, ಅಧಿಕಾರ ಮೆರೆದು, ಲೂಟಿ, ಮತಾಂತರಗಳನ್ನು ಮಾಡಿದ ಆಕ್ರಮಣಕಾರರು ಎಂದೂ ಎಲ್ಲೂ ನೆಮ್ಮದಿಯಿಂದಿರಲಿಲ್ಲವೆನ್ನುವುದು ಇತಿಹಾಸದ ದರ್ಶನ.
ಭಯವೆನ್ನುವುದು ಮನದಲ್ಲೇ ನರಕವನ್ನು ನಿರ್ಮಿಸಿ ಮನುಷ್ಯಜೀವನವನ್ನು ಅಂದಗೆಡಿಸುತ್ತದೆ. ಜಾಣನಾದ ಸ್ಥಿತಪ್ರಜ್ಞನು ಈ ಭಯದ ಕಪಿಮುಷ್ಟಿಯಿಂದ ಪಾರಾಗುತ್ತಾನೆ. ಹಾಗಾಗಿ ಆತನಿಗೆ ಭೋಗವು ಬಂಧನವಾಗುವುದಿಲ್ಲ. ತ್ಯಾಗವು ಕಷ್ಟವೆನಿಸುವುದಿಲ್ಲ. ಯೋಗವೂ ಅಗಮ್ಯವಾಗುವುದಿಲ್ಲ.
ರಾಗವೂ ಭಯವೂ ಇಲ್ಲದವನೂ ಎಂದೂ ‘ಕ್ರೋಧ’ವಶನಾಗುವುದಿಲ್ಲ, ಏಕೆಂದರೆ ‘ನಮ್ಮ ಸುಖಕ್ಕೆ ಬೇರಾರೋ ಬಾಧಕರು’ ಎಂಬ ಭಾವನೆಯೇ ಕ್ರೋಧವನ್ನು ಹುಟ್ಟಿಸುವುದಲ್ಲವೆ? ಆಗಿಹೋಗುವುದನ್ನೆಲ್ಲ ’ಜೀವನ’ ಎಂದು ಅಂಗೀಕರಿಸುವ ಜ್ಞಾನಿಯು, ಅವರಿವರ ಮೇಲೆ ಹೌಹಾರುತ್ತ ತನ್ನ ಶಾಂತಿಯನ್ನು ಹಾಳುಮಾಡಿಕೊಳ್ಳುವುದಿಲ್ಲ.
ಹೀಗೆ ಸುಖದುಃಖಗಳಲ್ಲಿ ಸಮಭಾವದಿಂದಿರುವವನೂ, ರಾಗ-ಭಯ-ಕ್ರೋಧಗಳನ್ನು ಗೆದ್ದವನೂ, ಸ್ಥಿತಪ್ರಜ್ಞನೂ ಆದವನೇ ’ಮುನಿ’ ಎನಿಸುತ್ತಾನೆ-ಎನ್ನುವುದು ಕೃಷ್ಣನೀಯುವ ನಿರ್ವಚನ. ಕೇವಲ ಜಟಾ-ವಲ್ಕಲ-ವನವಾಸಾದಿಗಳಷ್ಟೇ ’ಮುನಿತ್ವ’ದ ಲಕ್ಷಣಗಳಲ್ಲ. ಶ್ರೀಕೃಷ್ಣನು ಕೊಡುವ ಮುನಿತ್ವದ ಈ ನಿರ್ವಚನ, ಆಂತರಿಕ ಉನ್ನತಿಯ ಸ್ಥಿತಿಯತ್ತ ನಮ್ಮ ಗಮನವನ್ನು ಸೆಳೆಯುತ್ತಿದೆ. ಇಂತಹ ಮುನಿತ್ವವನ್ನು ಸಿದ್ಧಿಸಿಕೊಳ್ಳುವತ್ತ ನಾವು ಪ್ರವೃತ್ತರಾಗಬೇಕೆನ್ನುವುದು ಭಗವಂತನ ನಿರ್ದೇಶ.

ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a comment