Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Philosophy (ತತ್ವಶಾಸ್ತ್ರ) 1

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು!

Submitted by arathivb arathivb on February 14, 2018 – 5:21 am

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು!

ದಕ್ಷತೆಯಿಂದ ಕರ್ಮ ಮಾಡುತ್ತ ನಿರ್ಲಿಪ್ತಭಾವದಿಂದಿರಬೇಕು. ಫಲತ್ಯಾಗ ಮಾಡಿ ಬ್ರಾಹ್ಮೀಸ್ಥಿತಿಯನ್ನು ಸಾಧಿಸಬೇಕು ಎನ್ನುವ ಕರ್ಮರಹಸ್ಯವನ್ನು ಆಚಾರ್ಯ ಕೃಷ್ಣನು ಸಾಂಖ್ಯಯೋಗವೆಂಬ ಎರಡನೆಯ ಅಧ್ಯಾಯದಲ್ಲಿ ವಿವರಿಸಿದ್ದ. ಈ ಸಂದೇಶವೇ ಗೀತೆಯ ಸಾರವಾಗಿದೆ. ಇದಿಷ್ಟು ಬಾಳಿನಲ್ಲಿ ಅನುಷ್ಠಾನವಾದರೆ ಸಾಕು, ಐಹಿಕ-ಪಾರಮಾರ್ಥಿಕ ಜೀವನಗಳೆರಡೂ ಸಾರ್ಥಕ್ಯದ ಹಾದಿಯನ್ನು ಹಿಡಿಯುತ್ತವೆ. ಮೂರನೆಯ ಅಧ್ಯಾಯದಿಂದೀಚೆಗೆ ಅರ್ಜುನನು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತ ಕೃಷ್ಣನು ತನ್ನ ಮೂಲಸಂದೇಶವನ್ನು ಪುಷ್ಟಿಗೊಳಿಸುವಂತಹ ಹಲವಾರು ಮನಃಶಾಸ್ತ್ರೀಯ-ಧರ್ಮಶಾಸ್ತ್ರೀಯ ಹಾಗೂ ಯೋಗಶಾಸ್ತ್ರೀಯ ವಿಚಾರಗಳನ್ನು ಹೇಳುತ್ತ ಸಾಗುತ್ತಾನೆ.
ನಮಗಿಷ್ಟವಿಲ್ಲದ ಕರ್ಮವನ್ನು ಮಾಡಲೇಬೇಕಾಗಿ ಬಂದಾಗ, ಅನಿವಾರ್ಯತೆಯು ಅರ್ಥವಾದರೂ, ಕರ್ತವ್ಯವು ಸ್ಪಷ್ಟವಾದರೂ ಮೋಹವು ನಮ್ಮನ್ನು ಅಷ್ಟು ಸುಲಭವಾಗಿ ಮುಂದುವರೆಯಲು ಬಿಡುವುದಿಲ್ಲ. ‘ಹೇಗಾದರೂ ಜಾರಿಕೊಳ್ಳಲು ಉಪಾಯವಿದ್ದೀತೇ?’ ಎಂದು ಮತಿಯಲ್ಲಿ ಗೊಂದಲವನ್ನೆಬ್ಬಿಸುತ್ತಲೇ ಇರುತ್ತದೆ! ಅರ್ಜುನನ ವಿಷಯದಲ್ಲೂ ಹೀಗೇ ಆಯಿತು! ಇಷ್ಟೆಲ್ಲ ಆಲಿಸಿ ಕರ್ತವ್ಯವು ಸ್ಪಷ್ಟವಾಗಿದ್ದರೂ, ತನ್ನೊಳಗಿನ ಮೋಹವನ್ನು ಸಂಪೂರ್ಣ ಬಿಡಲಾಗದೆ ಹೀಗೆ ನಿವೇದಿಸುತ್ತಾನೆ:
ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ |
ತತ್ಕಿಂ ಕರ್ಮಣೀ ಘೊರೇ ಮಾಂ ನಿಯೋಜಯಸಿ ಕೇಶವ ||
ವ್ಯಾಮೀಶ್ರೇಣೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ |
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೊ—ಹಮಾಪ್ನುಯಾಮ್ |
(ಭ.ಗೀ.: 3.1-2)
‘ಹೇ ಕೇಶವ! ಕರ್ಮಕ್ಕಿಂತಲೂ ಬುದ್ಧಿಯು (ಜ್ಞಾನವು) ಶ್ರೇಷ್ಠ ಎನ್ನುತ್ತಿದ್ದೀಯೆ. ಮತ್ತೇಕೆ ನನ್ನನ್ನು ಈ ಘೊರವಾದ ಕರ್ಮದಲ್ಲಿ ‘‘ತೊಡಗು’’ ಎಂದೆನ್ನುತ್ತಿರುವೆ? ನನ್ನನ್ನು ಗೊಂದಲಪಡಿಸುತ್ತಿರುವೆ. ಯಾವುದಾದರೂ ಒಂದನ್ನು ‘‘ಶ್ರೇಯಸ್ಕರ’’ ಎಂದು ನಿಶ್ಚಯವಾಗಿ ಹೇಳು.’’
ನಿರ್ಲಿಪ್ತಕರ್ಮದ ಬಗ್ಗೆ ಎಲ್ಲ ಕೇಳಿಯಾದ ಮೇಲೂ ಅರ್ಜುನನಿಗೆ ಏಕೆ ಗೊಂದಲವಾಗುತ್ತಿದೆ? ಏಕೆಂದರೆ, ‘ಕೇಳಿದ’ ಮಾತ್ರಕ್ಕೆ ಮೋಹ ಬಿಟ್ಟುಹೋಗದು! ‘ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ’ ಎಂಬಂತೆ – ‘ಯುದ್ಧವೇ ಇದೀಗ ತನ್ನ ಧರ್ಮ’ ಎಂದು ಅರ್ಜುನನಿಗೆ ಗೊತ್ತಿದೆ, ಆದರೂ ಮಾಡುವ ‘ಮನಸ್ಸಿಲ್ಲ!’ ‘ನಿನಗೆ ಯುದ್ಧ ಬೇಡವೆನಿಸಿದರೆ ಬೇಡ ಬಿಡು, ಏನೀಗ?!’ ಎಂದು ತನಗೆ ‘ಅನುಕೂಲಿಸುವಂತಹ’ ಮಾತನ್ನು ಕೃಷ್ಣ ಹೇಳಿಲ್ಲವಲ್ಲ ಎಂಬ ಸಂಕಟ! ಮನುಷ್ಯನ ಬುದ್ಧಿಯೇ ಹೀಗೆ – ತನ್ನ ಮೋಹ-ದುರಾಸೆಗಳಿಗೆ ಅನುಕೂಲಿಸುವಂತಹ ಸಮರ್ಥನೆಯನ್ನು ಹುಡುಕುತ್ತದೆ! ದಾರಿಯಲ್ಲಿ ಹತ್ತು ಸಾವಿರ ರೂಪಾಯಿಗಳ ನೋಟುಗಳ ಕಟ್ಟು ಸಿಕ್ಕಿತು ಎಂದಿಟ್ಟುಕೊಳ್ಳೋಣ. ‘ಅಯ್ಯೋ ಪಾಪ! ಯಾರು ಬೀಳಿಸಿಕೊಂಡರೋ!’ ಎಂದು ಹುಡುಕಾಡಿ ಅದನ್ನು ಅವರಿಗೆ ಮರಳಿ ತಲುಪಿಸುವ ಪ್ರಯತ್ನವನ್ನು ಮಾಡುವುದು ಧರ್ಮ. ಅವರು ಸಿಗದಿದ್ದರೆ ದೇಗುಲದ ಹುಂಡಿಗೋ ಬಡವರಿಗೋ ಕೊಟ್ಟು ಕೈತೊಳೆದುಕೊಳ್ಳುವುದು ನ್ಯಾಯ. ಆದರೆ ಆ ಹಣವನ್ನು ತನ್ನ ವಶವಾಗಿಸಿಕೊಳ್ಳಲು ಬುದ್ಧಿಯು ತರ್ಕಿಸಲಾರಂಭಿಸುತ್ತದೆ; ‘ಆಹಾ! ಒಲಿದುಬಂದ ಭಾಗ್ಯಲಕ್ಷ್ಮೀ ಇದು! ಕಣ್ಣೊತ್ತಿಕೊಂಡು ತೆಗೆದಿಟ್ಟುಕೊಳ್ಳಬೇಕಪ್ಪ’ ಎಂದು! ಆ ಹತ್ತುಸಾವಿರದ ನೋಟುಗಳನ್ನು ಬೀಳಿಸಿಕೊಂಡ ವ್ಯಕ್ತಿಗೆ ಅದಾವ ತುರ್ತು ಅಗತ್ಯವಿತ್ತೋ! ಯಾರ ಚಿಕಿತ್ಸೆಯಾಗಬೇಕಿತ್ತೋ! ಯಾವ ಸಾಲ ತೀರಿಸಬೇಕಿತ್ತೋ! ಅವರು ಹುಡುಕಿಕೊಂಡು ಬಂದರೂ ಸಿಗದೆ ಹೋಗಿ ಅದೆಷ್ಟು ಸಂಕಟವಾಗಬಹುದೋ! ಅವರ ನೋವು ಅಸಹಾಯಕತೆಗಳು ನಮಗೆ ಶಾಪವಾಗದೆ ಇದ್ದಾವೆಯೇ! ನಾವು ಮಾಡುವ ಪ್ರತಿಯೊಂದು ಕರ್ಮದಲ್ಲೂ ಇಂತಹ ಧರ್ಮಸೂಕ್ಷ್ಮಗಳು ಇರುತ್ತವೆ! ಮೋಹವನ್ನು ಪಕ್ಕಕ್ಕಿಟ್ಟು ನೋಡಿದಾಗ ಮಾತ್ರ ಅರ್ಥವಾಗುತ್ತದೆ!
‘ತಾವು ಜಗತ್ತಿನ ಎಲ್ಲ ಜನಾಂಗಗಳನ್ನು ಮೆಟ್ಟಿ ನಿಲ್ಲಬೇಕು, ಶಾಸಿಸಬೇಕು’ ಎಂಬ ದುರಾಸೆಯಿಂದಾಗಿ ವಿಸ್ತಾರವಾದದಿಂದಾಗಿ ಮಧ್ಯಪ್ರಾಚ್ಯ ಹಾಗೂ ಐರೋಪ್ಯ ಮತಗಳು ಜಗತ್ತಿನಲ್ಲೆಲ್ಲ ಹರಡಲಾರಂಭಿಸಿದವು. ಅದಕ್ಕಾಗಿ ಅಸಂಖ್ಯ ಜನರ ಹಾಗೂ ಜನಾಂಗಗಳ ನರಮೇಧವನ್ನೇ ನಡೆಸುತ್ತ ಬಂದಿವೆ! ಪರಜನಾಂಗೀಯರ ಭಾಷೆ, ಧರ್ಮ, ಆಚಾರ, ವಿಚಾರ, ಭಾಷೆ ಜೀವನಶೈಲಿಗಳನ್ನು ನಾಶಗೊಳಿಸಿ ತಮ್ಮದನ್ನು ಹೇರುತ್ತವೆ. ಹೀಗೇಕೆ ಮಾಡುತ್ತಿದ್ದೀರಿ ಎಂದು ಅವರನ್ನು ಕೇಳಿನೋಡಿ; ‘ಇದು ದೇವರ ಕೆಲಸ! ಧರ್ಮದ ಶಾಸನ’ ಎಂದು ಸಮರ್ಥಿಸಿಕೊಳ್ಳುತ್ತಾರೆ!! ಇತರ ದೇಶಸಂಸ್ಕೃತಿಗಳನ್ನು ಮೆಟ್ಟಿ ಮತಾಂತರಗೊಳಿಸಲು ವಶವಾಗಿಸಿಕೊಳ್ಳಲು ಅದೆಷ್ಟು ಹಣ-ಕುತಂತ್ರ-ಮೋಸ-ರಾಜಕೀಯ-ಸುಳ್ಳುಗಳನ್ನು ಬಳಸುತ್ತಾರೆ! ಇವರಿಗೆಲ್ಲ ತಮ್ಮ ಕುತ್ಸಿತ ಮಹತ್ವಾಕಾಂಕ್ಷೆಗಳನ್ನು ತೀರಿಸಿಕೊಳ್ಳಲು ‘ಧರ್ಮ’ ಎನ್ನುವುದು ಕುಂಟು ನೆಪವಷ್ಟೇ. ಇದನ್ನೇ ಸುಭಾಷಿತವೊಂದು ಹೀಗೆ ಸಮಗ್ರವಾಗಿ ಹೇಳುತ್ತದೆ: ‘‘ಸತ್ಯ – ಸಾಮಾಜಿಕ ನ್ಯಾಯ – ಶ್ರೇಯಸ್ಸು ಮುಂತಾದ ಸಾರ್ವಕಾಲಿಕ ಧರ್ಮವನ್ನು ಯಾವ ವಿಶೇಷಧರ್ಮಗಳು (ಮತ ಪದ್ಧತಿ ನಂಬಿಕೆ ಸಿದ್ಧಾಂತಗಳು) ಬಾಧಿಸುತ್ತವೋ, ಅಂತಹ ಮತಗಳು ‘ಧರ್ಮ’ವೇ ಅಲ್ಲ, ಅವು ‘ಕುಧರ್ಮ’ಗಳು. ಯಾವ ಆಚಾರ – ಮತ – ಪದ್ಧತಿಗಳು ಧರ್ಮಕ್ಕೆ ಅವಿರೋಧವಾದಂತಹವುಗಳೋ, ಅವು ಮಾತ್ರವೇ ಸತ್ಯವೂ ಪರಾಕ್ರಮಶಾಲಿಯೂ ಆದ ‘ಧರ್ಮ’ಗಳು’’ (ಧರ್ಮಂ ಯೋ ಬಾಧತೇ ಧಮೋ ನ ಸ ಧರ್ಮಃ ಕುಧರ್ಮಕಃ| ಅವಿರೋಧಾತ್ತು ಯೋ ಧರ್ಮಃ ಸಃ ಧರ್ಮಃ ಸತ್ಯವಿಕ್ರಮಃ ||) ಎಂದು.
ಅರ್ಜುನನು ತನ್ನ ಕರ್ತವ್ಯವೆಂಬ ಧರ್ಮವನ್ನು ಮೋಹದಿಂದಾಗಿ ಕೈಬಿಟ್ಟರೆ, ಕರ್ತವ್ಯವೆಂಬ ಧರ್ಮವ್ಯವಸ್ಥೆಗೆ ಚ್ಯುತಿ ಬರುತ್ತದೆ. ಅವನನ್ನು ಅನುಸರಿಸಿ ಇತರರೂ ಕರ್ತವ್ಯಭ್ರಷ್ಟರಾಗಲಾರಂಭಿಸುತ್ತಾರೆ. ಒಬ್ಬರು ಲಂಚ ತೆಗೆದುಕೊಳ್ಳುವುದನ್ನು ನೋಡಿ ಮತ್ತೊಬ್ಬರಿಗೆ ‘ನಾನೂ ಯಾಕೆ ತೆಗೆದುಕೊಳ್ಳಬಾರದು?!’ ಎಂದು ಅನ್ನಿಸುವುದಿಲ್ಲವೆ? ಹಾಗೆ!
ಒಟ್ಟಿನಲ್ಲಿ ಅರ್ಜುನನಿಗೆ ತನಗೆ ಅನುಕೂಲವಾಗುವಂತಹ ಸಲಹೆ ಸಿಕ್ಕಿಲ್ಲ, ತನ್ನ ಮೋಹಕ್ಕೆ ವಿರುದ್ಧವಾದ ಕಠಿಣಧರ್ಮವನ್ನು ಆಚರಿಸಬೇಕಲ್ಲ ಎಂಬ ಸಂಕಟ ಇನ್ನೂ ಕಾಡುತ್ತಿದೆ!

ಡಾ.ಆರತಿ ವಿ ಬಿ

ಕೃಪೆ : ವಿಜಯವಾಣಿ

Leave a comment