Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Philosophy (ತತ್ವಶಾಸ್ತ್ರ) 1

ಬದುಕಿಗೆ ಭಗವದ್ಗೀತೆ – ಇಲ್ಲಿದನ್ನು ಇಲ್ಲಿಗೆ ಬಿಡು, ಕರ್ಮಕೌಶಲವೆಂಬ ಯೋಗವನ್ನು ಸಿದ್ಧಿಸಿಕೋ

Submitted by arathivb arathivb on October 31, 2017 – 6:17 am

ಬದುಕಿಗೆ ಭಗವದ್ಗೀತೆ – ಇಲ್ಲಿದನ್ನು ಇಲ್ಲಿಗೆ ಬಿಡು, ಕರ್ಮಕೌಶಲವೆಂಬ ಯೋಗವನ್ನು ಸಿದ್ಧಿಸಿಕೋ

‘ಬುದ್ಧಿಯೋಗವನ್ನಾಶ್ರಯಿಸು’ ಎಂದು ನಿರ್ದೇಶಿಸುತ್ತಿದ್ದ ಕೃಷ್ಣನು ಹೀಗೆ ಮುಂದುವರೆಸುತ್ತಾನೆ-
ಬುದ್ಧಿಯುಕ್ತೋ ಜಹಾತೀಹ ಉಭೇಸುಕೃತದುಷ್ಕೃತೇI
ತಸ್ಮಾದ್ಯೋಗಾಯಯುಜ್ಯ ಸ್ವಯೋಗಃ ಕರ್ಮಸು ಕೌಶಲಮ್ II
ಬುದ್ಧಿಯುಕ್ತನಾದವನು ಸುಕೃತ-ದುಷ್ಕೃತಗಳನ್ನು ಇಹದಲ್ಲೇ ತ್ಯಜಿಸುತ್ತಾನೆ. ನೀನು ಯೋಗಕ್ಕಾಗಿ ಪ್ರಯತ್ನಿಸು. ಕರ್ಮಕೌಶಲವೇ ಯೋಗ.
ಬುದ್ಧಿಯುಕ್ತನು ಎಂದರೆ ಬುದ್ಧಿಯೋಗವನ್ನರಿತ ಜ್ಞಾನಿ, ಸುಕೃತ ಎಂದರೆ ಸತ್ಕಾರ್ಯಗಳಿಂದ ಬರುವ ಪುಣ್ಯಫಲ, ದುಷ್ಕೃತ ಎಂದರೆ ದುಷ್ಕರ್ಮಗಳಿಂದ ಬರುವ ಪಾಪಫಲ, ಇಹ ಎಂದರೆ ಭೌತಿಕ ಅಥವಾ ವ್ಯಾವಹಾರಿಕದ ನೆಲೆ. ಸುಕೃತ-ದುಷ್ಕೃತಗಳನ್ನು ಇಹದಲ್ಲಿ ತ್ಯಜಿಸುವುದು ಎಂದರೆ ‘ಭೌತಿಕ ಜಗತ್ತಿನಲ್ಲಿ ಅನುಭವಿಸುವ ಪುಣ್ಯಪಾಪಗಳ ಫಲಗಳನ್ನು ಅಲ್ಲಿಗೇ ಬಿಡು, ಆಂತರ್ಯಕ್ಕೆ ತೆಗೆದುಕೊಳ್ಳಬೇಡ, ಪ್ರಕ್ಷುಬ್ಧಮತಿಯಾಗಬೇಡ’ ಎಂದರ್ಥ. ಕರ್ಮಕೌಶಲ ಎಂದರೆ ಬುದ್ಧಿಯೋಗವನ್ನು ಸಿದ್ಧಿಸಿಕೊಂಡು, ನಿರ್ಲಿಪ್ತ ನೈಪುಣ್ಯಯುತ ಕರ್ಮಮಾಡುವುದು’ ಎಂದರ್ಥ. ಯೋಗ ಎಂದರೆ ಆತ್ಯಂತಿಕ ಸಿದ್ಧಿ.
ಬುದ್ಧಿಯೋಗವನ್ನರಿತ ಜ್ಞಾನಿಗೆ ಗೊತ್ತು-ಸುಖದುಃಖಾದಿಗಳು ಪೂರ್ವ ಸುಕೃತ-ದುಷ್ಕೃತಗಳಿಗನುಗುಣವಾಗಿ ಬಂದೊದಗುವಂತಹವು. ಮಾಡಿದ್ದುಣ್ಣೋ ಮಹರಾಯ ಎಂಬಂತೆ, ನಾವೇ ಕಟ್ಟಿಕೊಂಡು ತಂದ ‘ಪ್ರಾರಬ್ಧ’ದ ಬುತ್ತಿಯನ್ನು ನಾವೇ ತಿನ್ನಬೇಕು! ‘ತಿನ್ನುವಾಗ’ ಸುಮ್ಮನೆ ಹರ್ಷ-ಶೋಕಗಳಿಗೆ ಆಸ್ಪದ ಕೊಟ್ಟರೆ, ಮನಸ್ಸು-ಬುದ್ಧಿಗಳು ಕೆಡುತ್ತವೆ. ಪುಣ್ಯವು ತರುವ ಸುಖಕ್ಕೆ ಮನಸೋತು ಅದಕ್ಕೆ ಅಂಟಿಕೊಂಡರೇ, ಮಮಕಾರ ಬೆಳೆದು ನಮ್ಮನ್ನು ಬಂಧನಕ್ಕೆ ಸಿಲುಕಿಸಿಬಿಡುತ್ತವೆ!ಪಾಪವು ತರುವ ದುಃಖಗಳನ್ನು ನೋಡಿ ಕಂಗಾಲಾಗಿ ತಪ್ಪಿಸಿಕೊಳ್ಳಲು ಯತ್ನಿಸಿದರೇ, ನೋವು-ನಿರಾಶೆಗಳಾವರಿಸಿ ಕಂಗೆಡಿಸುತ್ತವೆ! ಹಾಗಾಗಿ ಈ ಎರಡರ ವಿಷಯದಲ್ಲೂ ಜ್ಞಾನಿಯು ಸಮಭಾವದಿಂದಿರುತ್ತಾನೆ. ಪ್ರಾರಬ್ಧರೂಪಿ ಕಷ್ಟಗಳನ್ನು ಕಲ್ಲೆದೆಯಿಂದ ಎದುರಿಸುತ್ತಾನೆ. ಪುಣ್ಯರೂಪಿ ಸುಖಸಂಪದಗಳನ್ನು ನಿರ್ಲಿಪ್ತನಾಗಿ ಅಂಗೀಕರಿಸುತ್ತಾನೆ ಅಥವಾ ಸಮಾಜಕ್ಕೆ ಹಂಚಿಬಿಟ್ಟು ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವನಂತೆ’ ಕಾಣುತ್ತಾನೆ!
ಹೀಗೆ, ಬುದ್ಧಿಯುಕ್ತನು ಸುಕೃತ-ದುಷ್ಕೃತಗಳನ್ನು ‘ಇಹ’ದಲ್ಲೇ ಅರ್ಥಾತ್ ಬಾಹ್ಯದಲ್ಲೇ ಬಿಟ್ಟುಬಿಡುತ್ತಾನೆ. ಅದನ್ನು ಅಂತರಂಗಕ್ಕೊಯ್ದು ಹರ್ಷ-ಶೋಕಗಳ ಹೊಯ್ದಾಟಕ್ಕೆ ಸಿಲುಕುವುದಿಲ್ಲ. ಯಾವ ಮನುಷ್ಯನು ಹೀಗೆ ತನ್ನ ಅಂತರಂಗದ ಶಾಂತಿ, ಶಕ್ತಿ ಹಾಗೂ ಆತ್ಮಭಾವವನ್ನು ಸಮರ್ಥವಾಗಿ ಉಳಿಸಿಕೊಳ್ಳಬಲ್ಲನೋ, ಅಂತಹವನೇ ನಿಜಕ್ಕೂ ಸುಖೀ! ಜಾಣ! ಯಶಸ್ವಿ! ಅಂತರಂಗದ ಶಾಂತಿ ಹಾಗೂ ಶಕ್ತಿಗಳ ದೆಸೆಯಿಂದಾಗಿಯೇ ಅವನ ಕರ್ಮನೈಪುಣ್ಯವೂ ಹೆಚ್ಚುತ್ತದೆ. ಆತನ ನಡೆ-ನುಡಿಗಳಲ್ಲಿ ಸತ್ಯ-ಧರ್ಮ-ಶಾಂತಿ-ಶಕ್ತಿ-ಕೌಶಲಗಳ ವರ್ಚಸ್ಸು ಸೂಸುತ್ತದೆ, ಲೋಕಹಿತವನ್ನು ಸಾಧಿಸುತ್ತದೆ. ಇಂತಹವನೇ ಕರ್ಮಕುಶಲಿ! ಕರ್ಮಯೋಗಿ! ಇಂತಹ ಕರ್ಮಕೌಶಲದ ಸಿದ್ಧಿಯೇ ಯೋಗ- ಯೋಗಃ ಕರ್ಮಸು ಕೌಶಲಮ್- ಎಂದು ಸೂಚಿಸುತ್ತಿದ್ದಾನೆ ಆಚಾರ್ಯ ಕೃಷ್ಣ,
ಇಲ್ಲಿ, ‘ಕರ್ಮಕೌಶಲ’ವೆಂದರೆ ಕೇವಲ ‘ಅಚ್ಚುಕಟ್ಟಾಗಿ ವಿವರವಾಗಿ ಕರ್ಮವನ್ನು ಮಾಡಿಮುಗಿಸುವುದು’ ಎಂಬ ರೂಢಿಯ ಅರ್ಥವನ್ನಷ್ಟೇ ಗ್ರಹಿಸಬಾರದು. ಎಲ್ಲವನ್ನೂ ಪ್ರೀತಿಯಿಂದ ಕ್ರಮಯುತವಾಗಿಮಾಡಬೇಕು. ಆದರೆ ‘ತಾನು ಮಾಡಿದೆ’ನೆಂಬ ಮಮಕಾರವನ್ನೂ, ಕರ್ಮ-ಸಂಬಂಧಿಯಾದ ವಸ್ತು-ವ್ಯಕ್ತಿಗಳ ಮೇಲಿನ ವ್ಯಾಮೋಹವನ್ನೂ ಹಾಗೂ ಫಲಾಫಲಗಳ ಆತಂಕವನ್ನೂ ಅಲ್ಲಿಗಲ್ಲಿಗೇ ಬಿಟ್ಟು, ಅಂತರ್ಮುಖವಾಗಿ ಮೇಲೇರುತ್ತಿರಬೇಕು. ಆಗ ಮಾತ್ರ ಅದು ‘ಯೋಗ’ವಾಗಿ ಪರಿಣಮಿಸಬಲ್ಲ ‘ಕರ್ಮಕೌಶಲ’ವಾಗುತ್ತದೆ.
‘ಇಂತಹ ಯೋಗಕ್ಕಾಗಿ ಯತ್ನಿಸು ಅರ್ಜುನ’- ತಸ್ಮಾದ್ಯೋಗಾಯಯುಜ್ಯಸ್ವ- ಎಂದು ನಿರ್ದೇಶಿಸುತ್ತ ಕೃಷ್ಣನು ಹೀಗೆ ಮುಂದುವರೆಸುತ್ತಾನೆ-
ಕರ್ಮಜಂಬುದ್ಧಿಯುಕ್ತಾಹಿ ಫಲಂತ್ಯಕ್ವಮನೀಷಿಣಃ I
ಜನ್ಮಬಂಧ ವಿನಿರ್ಮುಕ್ತಾಃ ಪದಂಗಚ್ಛಂತ್ಯನಾಮಯಮ್ II
ಮನೀಷಿಗಳು ಕರ್ಮಜವಾದ ಫಲವನ್ನು ಇಹದಲ್ಲೇ ತ್ಯಜಿಸಿ, ಜನ್ಮಬಂಧದಿಂದ (ಜನ್ಮಮರಣಗಳ ಪ್ರಕ್ರಿಯೆಯಿಂದ) ಮುಕ್ತರಾಗಿ ಅನಾಮಯವಾದ ಪದವಿಯನ್ನು ಪಡೆಯುತ್ತಾರೆ.
ಕರ್ಮಫಲಗಳನ್ನು ಅನುಭವಿಸುವ ತುಡಿತವೇ ತಾನೆ ನಮ್ಮನ್ನು ಮತ್ತೆಮತ್ತೆ ಹುಟ್ಟಿಸುವುದು! “ಫಲಗಳನ್ನು ಇನ್ನೂ ಅನುಭವಿಸಿ ಮುಗಿಸಿಲ್ಲವಲ್ಲ!”ಎಂಬ ಖೇದವೇ ತಾನೆ ಮರಣಕಾಲದಲ್ಲಿ ನಮ್ಮನ್ನು ಸಂಕಟಪಡಿಸುವುದು! ಸಂಕಲ್ಪಗಳೆ ಇಲ್ಲದ ಮೇಲೆ, ಹುಟ್ಟು ಉಂಟಾಗದು. ಹಾಗಾಗಿ ಅಂತಹವರು ಜನ್ಮಮರಣ-ಚಕ್ರದಿಂದ ಪಾರಾಗುತ್ತಾರೆ. ಅನಾಮಯ-ಪದವನ್ನು(ಅರ್ಥಾತ್ಆಮಯವಿಲ್ಲದ/ಸಂಕಲ್ಪಜಾತ-ಜನ್ಮಮರಣ-ವಿಕಾರಗಳಿಲ್ಲದ)ಸ್ಥಿತಿಯನ್ನು ಪಡೆಯುತ್ತಾರೆ.
ಬುದ್ಧಿಯುಕ್ತನಾದ ಜ್ಞಾನಿಯೂ ದೇಹದಲ್ಲಿರುತ್ತ ಪೂರ್ವಕೃತಗಳ ಬುತ್ತಿಯನ್ನು ಅನುಭವಿಸುತ್ತಾನೆ. ಆದರೆ ಸಾಮಾನ್ಯರಿಗೂ ಅವನಿಗೂ ವ್ಯತ್ಯಾಸವೇನು ಗೊತ್ತೆ? ಸಾಮಾನ್ಯರ ಬುತ್ತಿಖಾಲಿಯಾಗುವುದೇ ಇಲ್ಲ! ಏಕೆಂದರೆ ಅವರು ಹೊಸ ಸಂಕಲ್ಪ-ವಿಕಲ್ಪಗಳನ್ನು ತುಂಬಿಕೊಳ್ಳುತ್ತಲೇ ಇರುತ್ತಾರೆ! ಆದರೆ ಜ್ಞಾನಿಯು ತನ್ನ ಬುತ್ತಿಯನ್ನು ಬೇಗ ಖಾಲಿಮಾಡಿಕೊಳ್ಳುತ್ತಾನೆ. ಮುಂದಿನ ಜನ್ಮಕ್ಕೆ ಒಯ್ಯಲು ‘ಬೇಕು-ಬೇಡ’ಗಳ ಸಂಕಲ್ಪಗಳ ಬುತ್ತಿಯನ್ನು ಕಟ್ಟಿಡುವುದಿಲ್ಲ. ಅದ್ಭುತವಾದ ಕರ್ಮಗಳನ್ನೆಸಗಿಯೂ, ಫಲಗಳನ್ನು ಇಲ್ಲಿಗಿಲ್ಲಿಗೇ ಬಿಟ್ಟು, ಎತ್ತರೆತ್ತರದ ಪ್ರಜ್ಞಾಸ್ತರಗಳನ್ನೇರಿ ವಿರಮಿಸುತ್ತಾನೆ, ರಮಿಸುತ್ತಾನೆ.
ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a comment