Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Philosophy (ತತ್ವಶಾಸ್ತ್ರ) 0

ಪಾರ್ಥನ ಪ್ರಜ್ಞೆ ಪರವಶ !

Submitted by arathivb arathivb on January 17, 2017 – 4:56 am

ಪಾರ್ಥನ ಪ್ರಜ್ಞೆ ಪರವಶ !

‘ಧರ್ಮಕ್ಷೇತ್ರ’ವೆನಿಸಿದ ಕುರುಕ್ಷೇತ್ರ ಭೂಮಿಯ ವಿಚಾರವನ್ನು ನೋಡಿದ್ದೇವೆ. ಧೃತರಾಷ್ಟ್ರನು ಕೇಳಲಾಗಿ ಸಂಜಯನು ಕೃಷ್ಣಾನುಗ್ರಹದಿಂದ ಪಡೆದಿದ್ದ ದಿವ್ಯದೃಷ್ಟಿಯಿಂದ ಯುದ್ಧಭೂಮಿಯಲ್ಲಿನ ಆಗುಹೋಗುಗಳನ್ನು ಕುಳಿತಲ್ಲಿಂದಲೇ ನೋಡುತ್ತ ವಿವರಿಸುತ್ತಾನೆ. ಅಲ್ಲಿ ನೆರೆದ ಉಭಯಸೈನ್ಯಗಳು, ಅವುಗಳ ಪ್ರಮುಖರು, ಇತರ ಯುಯುತ್ಸುಗಳು, ಯುಧಿಷ್ಠಿರನು ಆಚಾರ್ಯ ದ್ರೋಣರಲ್ಲಿ ನಿವೇದನೆ ಮಾಡಿಕೊಂಡಿದ್ದು, ಶಂಖನಾದದ ಮೂಲಕ ಭೀಷ್ಮಾಚಾರ್ಯರು ಯುದ್ಧಘೋಷ ಮಾಡಿದ್ದು, ಅದನ್ನು ಅನುಸರಿಸಿ ಇತರ ವೀರರು ಮಾಡಿದ ಭಯಂಕರ ಶಂಖನಾದಗಳು, ಶ್ವೇತಾಶ್ವಗಳ ರಥದಲ್ಲಿ ಶ್ರೀಕೃಷ್ಣನ ಸಾರಥ್ಯದಲ್ಲಿ ಶಸ್ತ್ರಸಜ್ಜಿತನಾಗಿ ಬಂದಿದ್ದ ಅರ್ಜುನ ಹಾಗೂ ಅವರಿಬ್ಬರು ಮಾತುಕತೆ ಇತ್ಯಾದಿಗಳನ್ನು ವಿವರಿಸುತ್ತಾನೆ.
ಯುದ್ಧವು ಪ್ರಾರಂಭವಾಗುವ ಮೊದಲು ಅರ್ಜುನನು ಶತ್ರುಸೈನ್ಯದಲ್ಲಿನ ವ್ಯಕ್ತಿಗಳನ್ನು ಮತ್ತೊಮ್ಮೆ ಸ್ಪಷ್ಟವಾಗಿ ನೋಡಬಯಸುತ್ತಾನೆ. ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಽಚ್ಯುತ—- ಎಂದು ವಿನಂತಿಸಲು, ಕೃಷ್ಣನು ರಥವನ್ನು ಉಭಯಸೈನ್ಯಗಳ ಮಧ್ಯದಲ್ಲಿ ನಿಲ್ಲಿಸುತ್ತಾನೆ. ಅರ್ಜುನನು ನೋಡಿದ- ವೈರಿಪಕ್ಷದಲ್ಲಿದ್ದವರು ಹಲವರು ತನ್ನ ದಾಯಾದಿಗಳು, ಗುರುಗಳು, ತಾತ, ಬಂಧುಮಿತ್ರರು ಹಾಗೂ ಅವರ ಮಕ್ಕಳು-ಮೊಮ್ಮಕ್ಕಳು! “ಅಯ್ಯೋ ಇವರೆಲ್ಲ ’ನನ್ನವರು’?! ಹೇಗೆ ಕೊಲ್ಲಲಿ?!” ಎಂದು ಭಾವುಕನಾಗಿ ಅರ್ಜುನನು ಉದ್ಗರಿಸಿದ “ಸೀದಂತಿ ಮಮ ಗಾತ್ರಾಣಿ—–” “ಹೇ ಕೃಷ್ಣ! ನನ್ನ ಅಂಗಾಂಗಗಳು ಸಡಿಲವಾಗುತ್ತಿವೆ, ಬಾಯಿ ಒಣಗುತ್ತಿದೆ, ದೇಹವು ನಡುಗುತ್ತಿದೆ, ಮೈರೋಮ ನಿಮಿರಿ ನಿಂತಿದೆ, ಗಾಂಢೀವಧನುಸ್ಸು ಕೈಯಿಂದ ಜಾರುತ್ತಿದೆ, ಚರ್ಮವು ಉರಿಯುತ್ತಿದೆ, ನಿಲ್ಲಲಾಗುತ್ತಿಲ್ಲ, ಮನಸ್ಸು ಭ್ರಮಿಸುತ್ತಿದೆ, ವಿಪರೀತ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ! ’ನನ್ನವರನ್ನೇ’ ಕೊಲ್ಲುವುದರಲ್ಲಿ ನನಗೆ ಯಾವ ಶ್ರೇಯಸ್ಸೂ ಕಾಣಬರುತ್ತಿಲ್ಲ—!“
ಶತ್ರುಪಡೆಯಲ್ಲಿನವರು ಹಲವರು ತನ್ನ ಬಂಧುಮಿತ್ರರೇ ಎನ್ನುವುದು ಅರ್ಜುನನಿಗೆ ಯುದ್ಧಪೂರ್ವದಲ್ಲೇ ಗೊತ್ತಿರಲಿಲ್ಲವೇ ? ಗೊತ್ತಿತ್ತು! ಹಾಗಾದರೆ ಆವಾಗ ಯುದ್ಧಗೈಯಲು ಮನಸ್ಸಿರಲಿಲ್ಲವೆ? ಹಾಗೇನಿಲ್ಲ! ತನ್ನ ಪರಿವರಕ್ಕೂ, ಕುಲಸ್ತ್ರೀಗೂ, ರಾಜ್ಯ ಹಾಗೂ ಧರ್ಮವ್ಯವಸ್ಥೆಗೂ ಕೌರವರು ಮಾಡಿದ ಅಕ್ಷಮ್ಯ ಅಪರಾಧಕ್ಕೆ ತಕ್ಕ ಪಾಠ ಕಲಿಸಲೇಬೇಕೆಂದು ಹಠತೊಟ್ಟಿದವನು ಈತ. ಹಾಗಾದರೆ ಅಧಿಕಾರ-ಐಶ್ವರ್ಯಾದಿಗಳ ಬಲದಿಂದ ಹಿರಿಯದೆನಿಸಿದ ಕೌರವಸೈನ್ಯವನ್ನು ಕಂಡು ದಿಗಿಲಾಯಿತೆ? ಅದರ ಮುಂದೆ ಚಿಕ್ಕದಾಗಿದ್ದ ಪಾಂಡವ ಸೈನ್ಯದ ಬಗ್ಗೆ ಆತ್ಮವಿಶ್ವಾಸ ಕುಂದಿತೆ? ಇಲ್ಲ! ಎಂತಹ ಎದುರಾಳಿಗೂ ಅಳುಕದೆ ಒಂಟಿಯಾಗಿ ಸೆಣೆಸಾಡಬಲ್ಲ ಶೌರ್ಯ-ಧೈರ್ಯ-ಛಲ-ಬಲಗಳಿದ್ದ ಅರ್ಜುನನಲ್ಲಿ ಅಂತಹ ಭೀತಿಯಿರಲು ಸಾಧ್ಯವೇ ಇಲ್ಲ! ಹಾಗಾದರೆ ಇದಕ್ಕಿದ್ದ ಹಾಗೆ ಏನಾಯಿತು? ಘೋರವಾದ ಪಾಪಕರ್ಮಗಳನ್ನು ಗೈದ ಕೌರವರೂ ಅವರ ಬೆಂಬಲಿಗರೂ ಒಗ್ಗೂಡಿ ನಿಂತಿರುವಾಗ, ಧರ್ಮಯುದ್ಧವಾದ ಅ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಬೇಕೆಂಬ ಕ್ಷತ್ರಿಯೋಚಿತ ಕರ್ತವ್ಯ ಅವನಿಗೆ ಏಕೆ ಬೇಡವೆನಿಸಿತು? ಅಧರ್ಮಿಗಳ ಸೊಕ್ಕಡಗಿಸಿ ಧರ್ಮಕ್ಕೆ ಜಯವನ್ನು ತರುವ ಉದ್ದೇಶದಿಂದಲೇ ಯುದ್ಧಸನ್ನದ್ಧನಾಗಿ ಬಂದವನಲ್ಲವೆ ಈತ? ಹಾಗಿರುವಾಗ ಇದಕ್ಕಿದ್ದಂತೆ ದುಷ್ಟರಾದ ಅವರನ್ನು ಕೊಲ್ಲಲು ಹಿಂಜರಿದದ್ದೇಕೆ? ಏಕೆಂದರೆ ಅವನಂತರಂಗದಿಂದ ಕುರುಡು ವ್ಯಾಮೋಹವು ಭುಗಿಲೆದ್ದಿತು! ಅದಕ್ಕೆ!
ಈ ಮೋಹ ಎನ್ನುವುದೇ ಹಾಗೆ! ಸರಾಸರಿಗಳನ್ನು, ಕರ್ತವ್ಯ-ನಿಷ್ಟೆ-ಧರ್ಮ ಮುಂತಾದವನ್ನೆಲ್ಲ ಮರೆಸಿಬಿಡುತ್ತದೆ! ತಕ್ಷಣ ಹದ್ದಿಕ್ಕದಿದ್ದರೆ ಮನೋಬುದ್ಧಿಗಳನ್ನು ಸಂಪೂರ್ಣ ಆವರಿಸಿ ನಮ್ಮ ನಿರ್ಣಯಗಳನ್ನು ಅದೇ ನಿಯಂತ್ರಿಸಲಾರಂಭಿಸುತ್ತದೆ! ನೂರಾರು ಗಂಡುಗಲಿಗಳನ್ನು ಗೆದ್ದಿದ್ದ ಅರ್ಜುನ ತನ್ನೊಳಗಿನ ಗುಪ್ತವೈರಿಯಾದ ವ್ಯಾಮೋಹವನ್ನು ಗೆಲ್ಲುವುದನ್ನು ಮರೆತಿದ್ದ. ಹಾಗಾಗಿ ವಿಷಮ ಪರಿಸ್ಥಿತಿಯಲ್ಲಿ ಅದು ಎದ್ದು ತನ್ನ ಕುತಂತ್ರವನ್ನು ಹೂಡಲಾರಂಭಿಸಿತು. ವ್ಯಾಮೋಹದ ಸುಂಟರಗಾಳಿ ಎದ್ದಾಗ, ಗಾಳಿಗೆ ಸಿಕ್ಕ ಎಂಜಲೆಲೆಯಂತೆ ಆತನ ಬುದ್ಧಿಯು ದಿಙ್ಮೂಢವಾಯಿತು! ಧರ್ಮ-ಕರ್ತವ್ಯ-ನ್ಯಾಯಗಳ ವಿಚಾರಗಳೆಲ್ಲ ಮರೆತೇಹೋಯಿತು. ಕರ್ತವ್ಯವಿರುದ್ಧದ ಧಾಟಿಯ ಆಲೋಚನೆಗಳನ್ನು ಮೂಡಿಸಿತು, ಮಾಡಬೇಕಾದ್ದನ್ನು ಮಾಡಲಾಗದಂತೆಯೂ ಮಾಡಬಾರದ್ದನ್ನೇ ಮಾಡುವ ಪ್ರವೃತ್ತಿಯನ್ನೂ ಉಂಟುಮಾಡಿತು.
ಭಗವದ್ಗೀತೆಯ ಈ ಅಧ್ಯಾಯ ತುಂಬ ಅರ್ಥಪೂರ್ಣ. ಇಲ್ಲಿ ಕೃಷ್ಣನ ಉಕ್ತಿಗಳು ಕಾಣಬರದಿದ್ದರೂ, ಅರ್ಜುನನ ಮನಃಸ್ಥಿತಿಯನ್ನು ತೋರಿಸುವುದರ ಮೂಲಕ ಲೋಕಜನರಲ್ಲಿ ಹೇಗೆ ಧರ್ಮಕರ್ಮಗಳ ವಿಚಾರವಾಗಿ ಗೊಂದಲ ಉಂಟಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಮನುಷ್ಯರೆಲ್ಲರ ಜೀವನದಲ್ಲೂ ಒಂದಲ್ಲ ಒಂದು ರೀತಿ ’ಸ್ವಜನರು’ ’ಕರ್ತವ್ಯ’ ’ಕಠಿಣ ನಿರ್ಧಾರ’ಗಳ ಕಹಿಸಂದರ್ಭಗಳನ್ನು ಎದುರಿಸಬೇಕಾದ ಪ್ರಸಂಗಗಳು ಬಂದುಹೋಗುತ್ತವೆ. ಕರ್ತವ್ಯವು ಸಹಜವೂ ಸುಲಭವೂ ಲಾಭದಾಯಕವೂ ಸ್ವಸುಖ-ನೆಮ್ಮದಿಗಳಿಗೆ ಬಾಧಕವಾಗದೆ ಇರುವವರೆಗೂ ಎಲ್ಲರೂ ಆರಾಮವಾಗುತ್ತಾರೆ. ಆದರೆ ಕೆಲವು ಕರ್ತವ್ಯಗಳು ನೆಮ್ಮದಿಯನ್ನು ಕೆಡಿಸುವಂತಹವಾಗಬಹುದು, ಸ್ವಜನ ಪ್ರೀತಿ, ವಸ್ತುಲಾಭ, ಸಂಬಂಧಗಳು, ನೆಮ್ಮದಿಗಳಿಗೇ ಕಂಟಕಪ್ರಾಯವೆನಿಸಬಹುದು, ಪ್ರಾಣರಕ್ಷಣೆಗೂ ಸವಲಾಗಬಹುದು. ಅಂತಹ ಕರ್ತವ್ಯವೊದಗಿಬಂದಲ್ಲಿ ಸಾಮಾನ್ಯ ಮನುಷ್ಯ ಹೇಗೆ ವರ್ತಿಸುತ್ತಾನೆ? ಹೇಗೆ ವರ್ತಿಸಬೇಕು? ಪ್ರಿಯವಲ್ಲದ ಕರ್ತವ್ಯವನ್ನೆಸಗುವಾಗ ಮೊದಲು ಬರುವುದು ಗೊಂದಲ, ಬುದ್ಧಿಯು ಭ್ರಾಂತಿಗೊಳಗಾಗಿ ಅಪ್ರಿಯವಾದ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಕುತರ್ಕವನ್ನು ಹೂಡಲಾರಂಭಿಸುತ್ತದೆ- ತನ್ನ ಈ ಗೊಂದಲವನ್ನು ಸಮರ್ಥಿಸಿಕೊಳ್ಳಲು ದಯೆ-ಕ್ಷಮೆ-ಶಾಂತಿ-ತ್ಯಾಗ-ಔದಾರ್ಯಗಳ ವಾದವನ್ನೂ ಬಳಸಿಕೊಳ್ಳುವುದುಂಟು! ಉದಾಹರಣೆಗೆ- ’ಸಮಾಜದಲ್ಲಿ ಯಾವನೋ ಒಬ್ಬ ತರುಣ ಮಾಡಬಾರದ ಕುಕೃತ್ಯಗಳನ್ನು ಮಾಡಿದ, ಪೋಲೀಸರಿಗೆ ಸಿಕ್ಕಿ ಬಿದ್ದ’ ಎಂದು ವೃತ್ತಪತ್ರಿಕೆಯಲ್ಲಿ ಓದಿದ ವ್ಯಕ್ತಿಯು “ಅಂತಹ ದುಷ್ಟನಿಗೆ ತಕ್ಕ ಶಾಸ್ತಿ ಆಗಲೇಬೇಕು” ಎಂದು ಆಲೋಚಿಸುತ್ತಾನೆ. ಆದರೆ ಆ ತರುಣ ’ತನ್ನ ಮಗನೇ’ ಆಗಿದ್ದರೆ ? ಆ ಕಹಿಸತ್ಯವನ್ನು ಒಪ್ಪಿಕೊಳ್ಳಲು ಆತನ ಮನಸ್ಸು ಅದೆಷ್ಟು ಒದ್ದಾಡುತ್ತದೆ! “ನಮ್ಮ ಹುಡುಗ ಮುಗ್ಧ, ಇದರಲ್ಲೇನೋ ಮೋಸ ಇದೆ”, “ಇನ್ನೂ ಚಿಕ್ಕವನು, ಪಾಪ, ಶಿಕ್ಷೆ ಕೊಡಲೇಬೇಕೆ? ಕ್ಷಮಿಸಿ ಬುದ್ಧಿ ಹೇಳಿದರಾಯಿತು”, “ಆ ಎಳೆಯ ವಯಸಿನಲ್ಲಿ ಎಲ್ಲರೂ ಮಾಡೋದೇ ಹೀಗೆ, ಏನು ಮಾಡುವುದು?”—– ಎಂಬಿತ್ಯಾದಿ ಧಾಟಿಯ ವಿಚಾರಗಳು ಮುಂದಾಗುತ್ತವೆ! ಅಪರಾಧ ಖಾತ್ರಿಯಾದರೂ ’ತನ್ನ’ ಮಗನನ್ನು ಕಾನೂನಿನಿಂದ ಪಾರುಮಾಡಲು / ಕಣ್ಣುತಪ್ಪಿಸಲು ತನುಮನಧನಗಳನ್ನು ವಿನಿಯೋಗಿಸಲು ಮುಂದಾಗುತ್ತಾನೆ! ಅದೊಂದು ಮನೋದೌರ್ಬಲ್ಯ. ಅರ್ಜುನನಲ್ಲೂ ಅಂತಹದೇ ಕುರುಡು ವ್ಯಾಮೋಹ ಎದ್ದಿದೆ.

ಡಾ ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a comment