Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Culture (ಸಂಸ್ಕೃತಿ), Default Category (ಪೂರ್ವ ನಿಯೋಜಿತ ವರ್ಗ), History (ಇತಿಹಾಸ), Literature (ಸಾಹಿತ್ಯ), Philosophy (ತತ್ವಶಾಸ್ತ್ರ) 1

ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೧

Submitted by Krishna Kolhar Kulkarni on May 28, 2015 – 6:57 pm One Comment

‘ಹಿಂದೆ ದಾಸಸಾಹಿತ್ಯವನ್ನು ಸಾಹಿತ್ಯವೆಂದು ಎಣಿಸುತ್ತಿರಲಿಲ್ಲವೆಂದು ತೋರುತ್ತದೆ. ದಾಸರು ಕವಿಗಳ ಜೊತೆಗೆ ತಾವೂ ಕವಿಗಳೆಂದು ಹೇಳಿಕೊಳ್ಳದೇ ಇದ್ದುದು ಇದರ ಮುಖ್ಯ ಕಾರಣವಾಗಿರಬೇಕು…’ ಎಂದು ಡಾ. ಮಾಸ್ತಿ ಅವರು ಗುರುತಿಸಿದ್ದಾರೆ.

ಆದರೆ ದಾಸರು ಈ ಬಗ್ಗೆ ಚಿಂತಿಸಿದವರಲ್ಲ. ‘ಸರ್ವೋತ್ತುಮನ ಸ್ತುತಿಸಲಿಕ್ಕೆ ಸರಿಬೆಸದಕ್ಷರದೆಣಿಕ್ಯಾಕೆ, ಯತಿ ಛಲ ಗಣ ಪ್ರಾಸವ್ಯಾಕೆ’ ಎಂದು ಕಾಖಂಡಕಿ ಮಹಿಪತಿ ದಾಸರು ಕೇಳಿದ್ದಾರೆ. ೧೨ನೆಯ ಶತಮಾನದ ಬಸವಣ್ಣನವರು ಇದೇ ರೀತಿಯಲ್ಲಿ ‘ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂದರು. ಶರಣರು, ದಾಸರೆಲ್ಲ ಸಾಹಿತಿಗೆ ಅವಶ್ಯಕವಾದ ರೀತಿಯಲ್ಲಿ ಅಧ್ಯಯನವನ್ನು ಮಾಡಿದವರಲ್ಲ. ಒಬ್ಬಿಬ್ಬರನ್ನು ಬಿಟ್ಟರೆ ಅವರು ಲೌಕಿಕ ಕಾವ್ಯಗಳನ್ನಾಗಲೀ, ಕಾವ್ಯ ಲಕ್ಷಣಗಳನ್ನಾಗಲೀ ಗಮನಿಸಿದವರಲ್ಲ. ಭಕ್ತಿಯ ನೆಲೆಯಲ್ಲಿ ಸೃಷ್ಟಿಯಾದ ಈ ಕೃತಿಗಳಿಗೆ ಅದರ ಅಗತ್ಯವೂ ಇರಲಿಲ್ಲ.

ವಾಸ್ತವದಲ್ಲಿ ದಾಸ ಸಾಹಿತ್ಯವು ಜನರ ಮಧ್ಯ, ಜನರಿಂದ, ಜನರ ಮುಂದೆಯೇ ಹುಟ್ಟಿ ಬೆಳೆದ ಸಾಹಿತ್ಯ. ಯಾವುದೇ ಒಂದು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹುಟ್ಟಿದ್ದಲ್ಲ. ಮನೆ ಮನೆ, ಓಣಿ ಓಣಿಗಳಲ್ಲಿ ತಿರುಗಾಡುತ್ತ, ಹಾಡುತ್ತ, ಕುಣಿಯುತ್ತ ಸಾಗುವಾಗ ಕಂಡ ಲೋಕಾನುಭವಗಳು. ಭಾವ ತನ್ಮಯತೆಯಲ್ಲಿ ಮೂಡಿ ಬಂದ ಈ ಕೃತಿಗಳು ಕವಿತೆಯ ಎಲ್ಲ ಕಾವ್ಯಾಂಶಗಳಿಂದ ತುಂಬಿ ನಿಂತುವು. ಸಾಹಿತ್ಯ ಮತ್ತು ಸಂಗೀತದ ಸಾಮರಸ್ಯ ಪ್ರತೀಕವಾದ ಈ ರಚನೆಗಳು ಶುದ್ಧ ಭಾವಗೀತೆಗಳಾಗಿವೆ ಎಂಬುದನ್ನು ನಂತರದ ದಿನಗಳಲ್ಲಿ ವಿದ್ವಾಂಸರು ಗುರುತಿಸಿದ್ದಾರೆ.

೧೯ನೆಯ ಶತಮಾನದಲ್ಲಿ ಪಾಶ್ಚಾತ್ಯ ಮಿಶನರಿಗಳಿಂದ ಕನ್ನಡ ಸಾಹಿತ್ಯವನ್ನು ಸಂಗ್ರಹಿಸುವ ಕೆಲಸ ನಡೆಯಿತು. ಕ್ರಿ ಶ ೧೮೪೮ರಲ್ಲಿ ವೈಗ್ಲೆ ಎಂಬವನು ಜರ್ಮನ ಪತ್ರಿಕೆ ಝಡ್ಡಿಎಮ್ಸಿ ಪತ್ರಿಕೆಯಲ್ಲಿ ‘ಕನ್ನಡ ಸಾಹಿತ್ಯ ಚರಿತ್ರೆ’ಯನ್ನು ಪ್ರಕಟಿಸಿದನು. ಅದರಲ್ಲಿ ದಾಸಸಾಹಿತ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆಯುತ್ತ ‘ಅವುಗಳು ಪರ್ಶಿಯನ್ ಗಜಲ್ ಗಳಂತೆ ಕೇಳುವುದಕ್ಕೆ ಮೋಹಕವಾಗಿವೆ’ ಎಂದು ಅಭಿಪ್ರಾಯ ಪಟ್ಟಿದ್ದಾನೆ. ಉದಾಹರಣೆಗೆ ಪುರಂದರದಾಸರ ‘ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ’ ಎಂಬ ಕೀರ್ತನೆಯನ್ನು ಜರ್ಮನ್ ಭಾಷೆಗೆ ಅನುವಾದಿಸಿ ಕೊಟ್ಟಿದ್ದಾನೆ. ಬಹುಶಃ ಕನ್ನಡ ಭಾಷೆಯ ಒಂದು ಕೃತಿ ಪಾಶ್ಚಾತ್ಯ ಭಾಷೆಗೆ ಅನುವಾದಗೊಂಡದ್ದು ಇದುವೆ ಮೊದಲು ಎಂದು ತೋರುತ್ತದೆ.

ಕನ್ನಡ ನಾಡಿನಾದ್ಯಂತ ಎಲ್ಲ ಸ್ತರಗಳಲ್ಲಿ ವರ್ಗ ವರ್ಣಗಳ ಭೇದವಿಲ್ಲದೆ ಜನರ ಬಾಯಲ್ಲಿ ಉಳಿದುಕೊಂಡು ಬಂದ ದಾಸಸಾಹಿತ್ಯವನ್ನು ಮೊಟ್ಟ ಮೊದಲಿಗೆ ಸಂಗ್ರಹಿಸಿ ಪ್ರಕಟಿಸಿದ ಶ್ರೇಯಸ್ಸು ಬಾಸೆಲ್ ಮಿಶನ್ನಿನ ರೆ. ಹರ್ಮನ್ ಮೊಗ್ಲಿಂಗನಿಗೆ [ಕ್ರಿ ಶ ೧೮೧೮-೧೮೮೧] ಸೇರುತ್ತದೆ. ಅವನು ಕ್ರಿ. ಶ. ೧೮೩೬ರಿಂದ ತನ್ನ ಇಲ್ಲಿಯ ವಾಸ್ತವ್ಯದಲ್ಲಿ ನಾಲ್ಕುನೂರಕ್ಕೂ ಮಿಕ್ಕಿದ ದಾಸರ ಪದಗಳನ್ನು ಸಂಗ್ರಹಿಸಿದನು. ಅವುಗಳಲ್ಲಿಯ ಒಂದು ನೂರು ಪದಗಳ ಸಂಗ್ರಹವನ್ನು ‘ದಾಸರ ಪದಗಳು’ ಎಂಬ ಹೆಸರಿನಿಂದ ಕ್ರಿ.ಶ.೧೮೫೦ರಲ್ಲಿ ಕಲ್ಲಚ್ಚಿನಲ್ಲಿ ಛಾಪಿಸಿ ಪ್ರಕಟಿಸಿದನು. ಮುಂದೆ ಎರಡೇ ವರುಷಗಳಲ್ಲಿ ೧೭೪ ಪದಗಳುಳ್ಳ ಸಂಕಲನವನ್ನು ಪ್ರಕಟಿಸಿದನು. ರೆ. ಹರ್ಮನ್ ಮೊಗ್ಲಿಂಗನು ಅದೇ ದಿನಗಳಲ್ಲಿ ಕನಕ-ಪುರಂದರದಾಸರ ೨೪ ಕೀರ್ತನೆಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿ ಪ್ರಕಟಿಸಿದನು೨. ಕನ್ನಡ ನಿಘಂಟಿನ ಕಿಟೆಲ್ ಕೀರ್ತನೆಗಳನ್ನು ಅಭ್ಯಾಸ ಮಾಡಿ ‘ಇಂಡಿಯನ್ ಎಂಟಿಕ್ವೆರಿ’ ಪತ್ರಿಕೆಯಲ್ಲಿ ‘ಕರ್ನಾಟಕ ವೈಷ್ಣವ ದಾಸಾಸ’ ಎಂಬ ಹೆಸರಿನ ವಿಮರ್ಶಾತ್ಮ ಲೆಖನವನ್ನು ಪ್ರಕಟಿಸಿದನು. ಇದುವೆ ದಾಸಸಾಹಿತ್ಯದ ಮೇಲಿನ ಪ್ರಥಮ ಲೇಖನ ಎನಿಸಿದೆ.
ಅನಂತರ ಇಂದಿನವರೆಗೆ ದಾಸಸಾಹಿತ್ಯ ಮತ್ತು ದಾಸರ ಕುರಿತು ಅನೇಕ ಪಿಹೆಚ್.ಡಿ ಪ್ರಬಂಧಗಳು, ಗ್ರಂಥಗಳು, ಲೇಖನಗಳು ಬಂದಿವೆ. ಜೊತೆಗೆ ೧೩೦ ದಾಸರ ೧೬೫೦೦ ಕೀರ್ತನೆಗಳ ಸಂಗ್ರಹ ೫೦ ಸಂಪುಟಗಳಲ್ಲಿ ಬಂದಿವೆ. ಮತ್ತು ಅದರಷ್ಟೇ ಸಂಖ್ಯೆಯ ಕೀರ್ತನೆಗಳು ಪ್ರಕಟನೆಗೆ ಕಾದಿವೆ ಎಂಬುದನ್ನು ಗಮನಿಸಿದರೆ ಅದರ ಅಗಾಧತೆಯ ಅರಿವಾಗುತ್ತದೆ.

ದಾಸ ಸಾಹಿತ್ಯದ ವಿಷಯ ಮುಂದಿನ ಲೇಖನದಲ್ಲಿ ಮತ್ತೆ ಚರ್ಚಿಸೋಣ.

ಚಿತ್ರ: ಗೂಗಲ್

One Comment »

  • H A Patil says:

    ಕುಲಕರ್ಣಿ ಯವರಿಗೆ ವಂದನೆಗಳು
    ಲೇಖನ ಸರಣಿಯ ಪ್ರಾರಂಭದ ಕಂತು ಆಸಕ್ತಿದಾಯಕವಾಗಿದೆ ಮುಂದಿನ ಕಂತುಗಳ ನಿರೀಕ್ಷೆಯಲ್ಲಿ

Leave a comment