Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ) 0

ಆದಿವಾಸಿ ಜನರ ಅಪ್ರತಿಮ ನಾಯಕ – ಕ್ರಾಂತಿಕಾರಿ ಅಲ್ಲೂರಿ ಸೀತಾರಾಮರಾಜು

Submitted by ramachandrahegde ramachandrahegde on February 22, 2017 – 5:30 am

ಆದಿವಾಸಿ ಜನರ ಅಪ್ರತಿಮ ನಾಯಕ – ಕ್ರಾಂತಿಕಾರಿ ಅಲ್ಲೂರಿ ಸೀತಾರಾಮರಾಜು

19

ಅಲ್ಲೂರಿ ಸೀತಾರಾಮರಾಜು: ಭಾರತದ ಸ್ವಾತಂತ್ರ್ಯಕ್ಕಾಗಿ, ಆದಿವಾಸಿ ಗುಡ್ಡಗಾಡು ಜನಾಂಗಗಳ ಹಕ್ಕುಗಳಿಗೆ ತನ್ನ ಪ್ರಾಣವನ್ನು ತೆತ್ತ ಕ್ರಾಂತಿಕಾರಿ ಹೋರಾಟಗಾರ, ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಆಂಧ್ರ ಪ್ರದೇಶದ ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮ ರಾಜು ಎಂಬ ಒಬ್ಬ ಅಪ್ರತಿಮ ನಾಯಕ ಮತ್ತು ದೇಶಭಕ್ತ. ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒಡಿಶಾ, ಆಂಧ್ರದ ಗಡಿಭಾಗದ ಅರಣ್ಯದಲ್ಲಿ ವಾಸವಾಗಿರುವ ಚೆಂಚು ಎಂಬ ಬುಡಕಟ್ಟು ಜನಾಂಗದ ಪರವಾಗಿ ೧೯೨೦ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿ ಹೋರಾಡಿ ಅವರಿಂದ ಅಮಾನುಷವಾಗಿ ಹತ್ಯೆಯಾದ ಹುತಾತ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಈ ಅಲ್ಲೂರಿ ಸೀತಾರಾಮ ರಾಜು. ಇವರ ತಂದೆ ವೆಂಕಟರಾಮರಾಜು ಮಹಾ ದೇಶಭಕ್ತರಾಗಿದ್ದರಿಂದ ಮಗನಿಗೆ ದೇಶಭಕ್ತಿಯ ಮೊದಲ ಪಾಠ ಅವರಿಂದಲೇ ನಡೆಯಿತು. ಪುಟ್ಟ ಬಾಲಕನಾಗಿದ್ದಾಗ ಇವರು ಒಮ್ಮೆ ಆಂಗ್ಲ ಅಧಿಕಾರಿಗೆ ಸೆಲ್ಯೂಟ್ ಹೊಡೆದಿದ್ದಕ್ಕೆ ತಮ್ಮ ತಂದೆಯಿಂದ ಪೆಟ್ಟುತಿಂದು ಇನ್ಯಾವತ್ತೂ ಪರಕೀಯರಿಗೆ ಸಲಾಮು ಹೊಡೆಯಬಾರದೆಂಬ ಪಾಠ ಕಲಿತಿದ್ದರು. ಮೆಟ್ರಿಕ್ ಓದುತಿದ್ದಾಗಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತರಾಗಿದ್ದ ರಾಜು ಮುಂದೆ ದೇಶವನ್ನು ಮುಕ್ತಗೊಳಿಸುವ ಹೋರಾಟದಲ್ಲಿ ಭಾಗವಹಿಸುವ ಪಣತೊಟ್ಟರು. ಕಾಲೇಜು ಶಿಕ್ಷಣದ ನಂತರ ದೇಶ ಪರ್ಯಟನೆಯಲ್ಲಿ ತೊಡಗಿದ ರಾಜುಗೆ ಅನೇಕ ಕ್ರಾಂತಿಕಾರಿ ನಾಯಕರ ಪರಿಚಯವಾಯ್ತು. ಅದೇ ಸೀತಾರಾಮ ರಾಜು ಅವರ ಕ್ರಾಂತಿಕಾರಿ ಚಳುವಳಿಗೆ ಮುನ್ನುಡಿ ಬರೆಯಿತು. ದೇಶ ಪರ್ಯಟನೆ ಮುಗಿಸಿ ಹಿಂದಿರುಗುವ ವೇಳೆಗೆ ಅವನಲ್ಲಿ ಬಹಳ ಬದಲಾವಣೆಯಾಗಿತ್ತು. ಧಾರ್ಮಿಕ ಪ್ರವೃತ್ತಿ ಹುಟ್ಟಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂಬ ಇಚ್ಛೆ ಪ್ರಬಲವಾಗಿತ್ತು. ತಾನು ಸನ್ಯಾಸಾಶ್ರಮ ಸ್ವೀಕರಿಸಿ ತನ್ನ ಜೀವನವನ್ನು ದೇಶಸೇವೆ, ಜನಸೇವೆಗಳಲ್ಲಿ ತೊಡಗಿಸಬೇಕೆಂದು ಪ್ರತಿಜ್ಞೆ ಮಾಡಿದ. ದೀರ್ಘ ಸಾಧನೆಯಲ್ಲಿ ತೊಡಗಿದ ರಾಜು ಈ ದೇಶದ ಅನೇಕ ಶ್ರೇಷ್ಠ ಗ್ರಂಥಗಳ ಅಧ್ಯಯನ ಮಾಡಿದ, ಬಿಲ್ವಿದ್ಯೆ, ಕುದುರೆ ಸವಾರಿಗಳಲ್ಲಿ ಪ್ರವೀಣನಾದ. ಇದೇ ವೇಳೆಗೆ ಬ್ರಿಟಿಷರು ಆದಿವಾಸಿ ಬುಡಕಟ್ಟು ಜನಾಂಗಗಳ ವಿರುದ್ಧ ಜಾರಿಗೆ ತಂದ ಅರಣ್ಯ ಕಾಯ್ದೆಯ ಕಾನೂನು ಆತನ ಹೋರಾಟಕ್ಕೆ ವೇದಿಕೆಯಾಯಿತು. ಬ್ರಿಟಿಷರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಆದಿವಾಸಿಗಳನ್ನು ಸಂಘಟಿಸುವುದರ ಮೂಲಕ ಅವರ ಪರ ಹೋರಾಟಕ್ಕೆರಾಜು ಇಳಿದರು. ಸೀತಾರಾಮ ರಾಜು ಮನ್ಯಂ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿದ್ದ ಕೋಯಾ ಹಾಗೂ ಚೆಂಚು ಗುಡ್ಡಗಾಡು ಜನಾಂಗದ ಪರವಾಗಿ ಹೋರಾಡಿ ಅವರ ಆರಾಧ್ಯ ದೈವವೇ ಆದರು. ಈ ಜನಾಂಗದಲ್ಲಿ ಬೇರು ಬಿಟ್ಟಿದ್ದ ನರಬಲಿ ಪದ್ಧತಿ ಮತ್ತು ಅನೇಕ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಿದ್ದಲ್ಲದೆ, ಈ ಜನಾಂಗವನ್ನು ಮದ್ಯದ ದಾಸ್ಯದಿಂದ ಮುಕ್ತಿಗೊಳಿಸಿದರು. ಈ ಆದಿವಾಸಿ ಜನರ ಮೇಲೆ ಆಂಗ್ಲ ಅಧಿಕಾರಿಗಳು ನಡೆಸುತ್ತಿದ್ದ ದಬ್ಬಾಳಿಕೆಯನ್ನು ತಡೆಗಟ್ಟಲು ಸ್ವಾತಂತ್ರವೊಂದೇ ಮಾರ್ಗವೆಂದರಿತು, ಆಳರಸರ ವಿರುದ್ಧ ಹೋರಾಟ ಪ್ರಾರಂಭಿಸಿದರು. ಅಕ್ಷರ ಲೋಕದಿಂದ ವಂಚಿತರಾಗಿ, ನಾಗರೀಕತೆಯಿಂದ ದೂರವಾಗಿದ್ದ ಚಂಚು ಬುಡಕಟ್ಟು ಜನರ ಪರವಾಗಿ ಅಲ್ಲೂರಿ ಸೀತಾರಾಮ ರಾಜು ನಡೆಸಿದ ಹೋರಾಟ “ರಂಪಾ ದಂಗೆ” ಎಂದು ಆಂಧ್ರದ ಇತಿಹಾಸದಲ್ಲಿ ದಾಖಲಾಗಿದೆ. ಗುಡ್ಡಗಾಡು ಜನರ ಮೇಲೆ ಬ್ರಿಟಿಷರು ನಡೆಸುತ್ತಿದ್ದ ದೌರ್ಜನ್ಯದ ವಿರುದ್ಧ ದನಿಯೆತ್ತಿದ ರಾಜು ಆದಿವಾಸಿಗಳ ಬೃಹತ್ ಪಡೆಯನ್ನೇ ತಯಾರು ಮಾಡಿ ಬ್ರಿಟೀಶರಿಗೆ ಸಿಂಹಸ್ವಪ್ನವಾದರು. ಇವರ ಹೋರಾಟದ ಫಲವಾಗಿ ಅನೇಕ ಪ್ರದೇಶಗಳು ಬ್ರಿಟಿಷರಿಂದ ಮುಕ್ತವಾಗಿ ಆದಿವಾಸಿ ಜನರು ತಮ್ಮ ಸ್ವಾತಂತ್ರ್ಯವನ್ನು ಮರಳಿ ಪಡೆದರು. ಆದರೆ ಈ ಹೋರಾಟದಲ್ಲಿ ರಾಜು ತನ್ನ ಅನೇಕ ದೇಶಭಕ್ತ ವೀರ ಬಂಟರನ್ನು ಕಳೆದುಕೊಳ್ಳಬೇಕಾಯ್ತು. ಕೊನೆಗೆ ರಾಜುವನ್ನು ನ್ಯಾಯಮಾರ್ಗದಿಂದ ಹಿಡಿಯಲು ಸಾಧ್ಯವಿಲ್ಲ ಎಂದರಿತ ಬ್ರಿಟಿಷರು ಸಂಧಿಗೆ ಆಹ್ವಾನಿಸಿದರು. ಸಂಧಿಗೆ ಕರೆಸಿಕೊಂಡು ಬಂಧಿಸುವ ಬ್ರಿಟಿಷರ ಮೋಸದ ಬಲೆಗೆ ಬಿದ್ದ ಸೀತಾರಾಮರಾಜು ಸೆರೆಯಾದರು. ಸೀತಾರಾಮ ರಾಜುವನ್ನು ಮರವೊಂದಕ್ಕೆ ಕಟ್ಟಿಹಾಕಿ, ಅವರೊಬ್ಬ ದರೋಡೆಕೋರನೆಂದು ಬ್ರಿಟಿಷರು ನಿಂದಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಸೀತಾರಾಮ ರಾಜು ‘ಮೋಸದಿಂದ ಭಾರತವನ್ನು ಕೊಳ್ಳೆ ಹೊಡೆಯುತ್ತಿರುವ ನೀವು ದರೋಡೆಕೋರರು’ ಎಂದಬ್ಬರಿಸಿದರು. ‘ನೀವು ಒಬ್ಬ ರಾಜುವನ್ನು ಕೊಲ್ಲಬಹುದು, ಆದರೆ ನಮ್ಮ ಭಾರತಮಾತೆ ಬಂಜೆಯಲ್ಲ. ಅವಳ ರತ್ನ ಗರ್ಭದಲ್ಲಿ ಕೋಟ್ಯಂತರ ರಾಜುಗಳು ಹುಟ್ಟಿ ನಿಮ್ಮ ಹುಟ್ಟಡಗಿಸುತ್ತಾರೆ. ಒಂದಲ್ಲಾ ಒಂದು ದಿನ ನೀವು ಇಲ್ಲಿಂದ ತೆರಳಲೇ ಬೇಕಾಗುತ್ತದೆ’ ಎಂದು ಗುಡುಗಿದರು. ಕೊನೆಗೆ ಅವರನ್ನು ಮೇ ೭, ೧೯೨೪ರಂದು ಅಮಾನುಷವಾಗಿ ಕೊಲ್ಲಲಾಯಿತು. ‘ಸೀತಾರಾಮ ರಾಜು ಇನ್ನಾವ ದೇಶದಲ್ಲಾದರೂ ಜನಿಸಿದ್ದರೆ ಇಲ್ಲಿಗಿಂತಲೂ ಹೆಚ್ಚು ಗೌರವಪಡೆಯುತ್ತಿದ್ದ’ ಎಂದಿದ್ದಾರೆ ನೇತಾಜಿ ಸುಭಾಷ್ ಚಂದ್ರ ಬೋಸರು. ಹೌದು ರಾಜು ಅಷ್ಟೇ ಅಲ್ಲ ಎಲ್ಲಾ ಸ್ವಾತಂತ್ರ್ಯ ವೀರರಿಗೂ ಅದೇ ಮಾತು ಅನ್ವಯಿಸುವಂತೆ ಆಗಿದ್ದು ಮಾತ್ರ ಈ ದೇಶದ ದುರಂತ.

Leave a comment